ಭಾರತದ ಪ್ರಾಣಿಸಂಪತ್ತು
ಜೀವಿಗಳ ಸ್ವಾಭಾವಿಕ ಹಂಚಿಕೆಯನ್ನು ಪರಿಶೀಲಿಸಿದರೆ ಕೆಲವು ಪ್ರಭೇದಗಳು ಎಲ್ಲೆಡೆ, ಮತ್ತೆ ಕೆಲವು ನಿರ್ದಿಷ್ಟ ಪ್ರದೇಶಗಳಿಗಷ್ಟೇ ಸೀಮಿತವಾಗಿರುವುದನ್ನು ಕಾಣಬಹುದು. ಕೆಲವೊಂದು ಜೀವಿಗಳನ್ನು ಆರ್ಥಿಕ ದೃಷ್ಟಿಯಿಂದ ಇಲ್ಲವೇ ವೈಜ್ಞಾನಿಕ, ಮನೋರಂಜನಾ ಭಾವನೆಗಳಿಂದ ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸಿರುವ ದಾಖಲೆಗಳೂ ಸಿಗುತ್ತವೆ. ಹಾಗಾಗಿ ಇಂದು ಯಾವುದೇ ಸ್ಥಳದಲ್ಲಿ ಕಂಡು ಬರುವ ಜೀವಿಗಳನ್ನು ಸ್ವಸ್ಥಾನಿಗಳು, ವರ್ಗಾಯಿತ ಜೀವಿಗಳೆಂದು ಗುರುತಿಸಬಹುದು.

ಸ್ವಸ್ಥಾನ ಜೀವಿಗಳನ್ನು ಆಧಾರವಾಗಿಟ್ಟುಕೊಂಡು 1857ರಲ್ಲಿ ಪಿ.ಎಲ್. ಸ್ಕ್ಲೇಟï 6 ಭೂಭಾಗಗಳನ್ನು ಗುರುತಿಸಿದ್ದ. ಇಂತಹ ವಿಭಾಗಕ್ಕೆ ಆತ ಆಧರಿಸಿದ್ದು ಪ್ರಮುಖವಾಗಿ ಪಕ್ಷಿಗಳ ಹಂಚಿಕೆಯನ್ನು ಅನಂತರ ಆಲ್ಫ್ರೆಡ್ ರಸಲ್ ವಾಲೆಸ್ 1876ರಲ್ಲಿ ಸಸ್ಯ ಮತ್ತು ವಿಶೇಷ ಪ್ರಾಣಿಗಳ ಹಂಚಿಕೆಯನ್ನು ಆಧಾರವಾಗಿರಿಸಿಕೊಂಡು ಸ್ಕ್ಲೇಟರನ ಭೂಭಾಗಗಳಿಗೆ ಹೆಚ್ಚಿನ ಮಾಹಿತಿ ಒದಗಿಸಿದ್ದ. ಆ ಭೂಭಾಗಗಳೆಂದರೆ, 1) ಪೇಲಿಯಾರ್ಕಟಿಕ್ 2) ಇಥಿಯೋಪಿಯನ್ 3) ಓರಿಯೆಂಟಲ್ 4) ಆಸ್ಟ್ರೇಲಿಯನ್ 5) ನಿಯಾರ್ಕಟಿಕ್ 6) ನಿಯೋಟ್ರಾಪಿಕಲ್.

ಈ ಮೇಲಿನ ಆರು ಭೂಭಾಗಗಳಲ್ಲಿ ಭಾರತ ಓರಿಯೆಂಟಲ್ ಭಾಗಕ್ಕೆ ಸೇರಿದೆ. ಭಾರತದೊಂದಿಗೆ ಈ ಭೂಭಾಗಕ್ಕೆ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಬರ್ಮಾ, ಇಂಡೋನೇಷಿಯಾಗಳೂ ಸೇರಿವೆ. ನಾಲ್ಕು ದಶಲಕ್ಷ ಚದರ ಕಿ.ಮೀ ಗಳಿಗಿಂತಲೂ ಹೆಚ್ಚು ವಿಸ್ತಾರವಾದ ಭಾರತ ವಿಭಿನ್ನ ಭೌತಿಕ, ಭೌಗೋಳಿಕ ಪರಿಸರ ವಲಯಗಳನ್ನು ಹೊಂದಿದೆ. ಇವನ್ನು ಪ್ರಮುಖ ಜೈವಿಕ ವಲಯಗಳೆಂದು ಪರಿಗಣಿಸಬಹುದು. ಈ ಜೈವಿಕ ವಲಯಗಳು ಜಲ, ನೆಲ ಮತ್ತು ವಾಯು ಗೋಳದ ವೈವಿಧ್ಯವನ್ನು ತೋರುವುದಲ್ಲದೇ ಆಯಾ ಸ್ಥಳಕ್ಕೆ ಸಂಪರ್ಕದಲ್ಲಿರುವ ಗಡಿ ಪ್ರದೇಶದ ಭೂಭಾಗದ ಪ್ರಾಣಿ ಸಂಪತ್ತಿನ ಹೋಲಿಕೆಗಳನ್ನು ತೋರುತ್ತದೆ.

ಭಾರತದ ಕೆಲವು ಪ್ರದೇಶಗಳು ಜೀವಿ ಪ್ರಭೇದಗಳ ಹೆಚ್ಚಳಿಕೆಯಿಂದ ಸಮೃದ್ಧವಾಗಿವೆ. ಇಂತಹ ಪ್ರದೇಶಗಳನ್ನು ಬೃಹತ್ ಜೀವ ವೈವಿಧ್ಯ ತಾಣಗಳೆಂದು ಪರಿಗಣಿಸಲಾಗಿದೆ. ಜಗತ್ತಿನಲ್ಲಿ ಇಂತಹ 12 ಬೃಹತ್ ತಾಣಗಳಿದ್ದು ಅವುಗಳಲ್ಲಿ ಭಾರತವೂ ಒಂದು. ಜಗತ್ತಿನ ಭೂಭಾಗದ ಶೇಕಡ 2.4ರಷ್ಟು ವಿಸ್ತಾರದ ಭಾರತದಲ್ಲಿ ಪ್ರಪಂಚದ ಜೈವಿಕ ವೈವಿಧ್ಯದ ಶೇಕಡ 8 ರಷ್ಟನ್ನು ಹೊಂದಿದೆ ಎಂದರೆ ಭಾರತ ಜೈವಿಕ ವೈವಿಧ್ಯದಲ್ಲಿ ಶ್ರೀಮಂತ ನಾಡು ಎನ್ನಬಹುದು.

ಮೇಯರ್ಸ್ ಎಂಬ ಪರಿಸರ ತಜ್ಞ ಜೀವ ವೈವಿಧ್ಯದ ದೃಷ್ಟಿಯಿಂದ ಸ್ಥಳೀಯ ಜಾತಿಯ ಜೀವಿಗಳು ಸಮೃದ್ಧವಾಗಿರುವ ಆದರೆ ವಿನಾಶದ ಅಪಾಯಕ್ಕೊಳಗಾಗಿರುವ ಪ್ರದೇಶಗಳನ್ನು ಗುರುತಿಸಿ 1988ರಲ್ಲಿ ಅಂತಹ 18 ತಾಣಗಳನ್ನು ಗುರುತಿಸಿದ. ಅವುಗಳಲ್ಲಿ ಎರಡು ಭಾರತದಲ್ಲಿವೆ. ಅವೇ ಪೂರ್ವ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು. ಇಂದು ಅಂತಹ ತಾಣಗಳ ಸಂಖ್ಯೆ 25ಕ್ಕೆ ಏರಿದೆ.
1 ಹಿಮಾಲಯದ ಗಡಿಪ್ರದೇಶ: ಪೂರ್ವಕ್ಕೆ ಬ್ರಹ್ಮಪುತ್ರ, ಪಶ್ಚಿಮಕ್ಕೆ ಸಿಂಧೂ ನದಿ ಇವುಗಳ ನಡುವೆಯಿರುವ ಹಿಮಾಲಯ ಪರ್ವತಗಳ ಸುತ್ತಮುತ್ತಲಿನ ಪ್ರದೇಶಗಳು ಈ ಪ್ರಾಂತ್ಯಕ್ಕೆ ಸೇರುತ್ತವೆ. ಪಾಕಿಸ್ತಾನದ ಕೆಲವು ಪ್ರದೇಶಗಳು ಮತ್ತು ನೇಪಾಳ ಕೂಡ ಇದಕ್ಕೆ ಸೇರಿಕೊಂಡಿವೆ. ವಿವಿಧ ಎತ್ತರಗಳ ಈ ಪರ್ವತ ವಿಭಾಗ ವಿಚಿತ್ರ ಮಾದರಿಯ ಪ್ರಾಣಿಗಳಿಗೆ ಆವಾಸಸ್ಥಾನವಾಗಿದೆ. ಈ ಪ್ರಾಂತ್ಯವನನ್ನು ಪುನಃ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಬಹುದು.

2 ಹಿಮಾಲಯ ಪ್ರದೇಶ ವಾಯುವ್ಯ ಹಿಮಾಲಯ : ಕಾಶ್ಮೀರ, ಭೂತಾನಗಳನ್ನೊಳಗೊಂಡ ಹಿಮಾಲಯದ ಪೂರ್ವಕ್ಕೆ ಈ ಇಳಿಜಾರು ಪ್ರದೇಶ ದಟ್ಟ ಮತ್ತು ಸದಾ ಹಸುರು ಕಾಡುಗಳಿಂದ ಕೂಡಿದೆ. ಪರ್ಯಾಯ ದ್ವೀಪಕಲ್ಪದ ಪ್ರಾಂತ್ಯದ ಕಾಡುಗಳಲ್ಲಿ ಕಾಣಸಿಗುವ ಹುಲಿ, ಆನೆ, ಕಾಟಿ, ಕಡವೆ ಮತ್ತು ಕಾಡುಕುರಿ (ಮಂಟ್‍ಜ್ಯಾಕ್) ಮುಂತಾದ ಪ್ರಾಣಿಗಳು ಇಲ್ಲಿಯೂ ಉಂಟು. ಪರ್ವತದ ತಪ್ಪಲಿನ ಜೌಗು ಪ್ರದೇಶಗಳಲ್ಲಿ ಹಾಗೂ ಅಡವಿಗಳಲ್ಲಿ ಕಾಟಿಯ ಬದಲು ಕಾಡೆಮ್ಮೆ (ವೈಲ್ಡ್ ಬಫೆಲೊ), ಹಂದಿ, ಜಿಂಕೆ, ಜೌಗುಜಿಂಕೆಗಳು ವಾಸಿಸುತ್ತವೆ. ಸಮುದ್ರ ಮಟ್ಟಕ್ಕಿಂತ 1525 ರಿಂದ 1830 ಮೀ ಎತ್ತರದ ಪ್ರದೇಶಗಳಲ್ಲಿ ಕಾಡುಗಳು ಮತ್ತಷ್ಟು ದಟ್ಟ. ಈ ಭಾಗಗಳಲ್ಲಿ ಭಾರತದ ಇತರ ಭಾಗಗಳಿಗೆ ಕಾಣದ ಪಾಂಡ, ಅನ್ವೇಷಕ ಬ್ಯಾಡ್ಜರ್ (ಫೆರೆಟ್ ಬ್ಯಾಡ್ಜರ್), ಜೌಗುಜಿಂಕೆ, ಮುಳ್ಳುಹಂದಿ, ಕೂರುಹಂದಿ, ಕೆಲವು ಜಾತಿಯ ಚಿಗರೆಗಳು ವಾಸಿಸುತ್ತವೆ. ಇಲ್ಲಿಯ ಕೆಲವು ಪ್ರಾಣಿಗಳಿಗೂ ಚೀನದೇಶದ ಪ್ರಾಣಿಗಳಿಗೂ ಹೋಲಿಕೆಯುಂಟು.

ಪಶ್ಚಿಮ ವಿಭಾಗ: ಲಡಾಕಿನಿಂದ ಕಾಶ್ಮೀರದ ಚಿತ್ರಾಲದವರೆಗಿನ ಪ್ರದೇಶಗಳನ್ನೊಳಗೊಂಡ ಈ ಭಾಗದಲ್ಲಿ ವಾಸಿಸುವ ಕೆ¯ವು ಪ್ರಾಣಿಗಳು ಯೂರೋಪ್ ಹಾಗೂ ಉತ್ತರ ಏಷ್ಯದ ಮಾದರಿಗಳನ್ನು ಹೋಲುತ್ತವೆ. ಉಳಿದವು ಭಾರತಕ್ಕೆ ಸೀಮಿತವಾಗಿರುವ ಪ್ರಾಣಿಗಳು, ಕಾಡುಕುರಿ, ಕೃಷ್ಣಮೃಗ ಮತ್ತು ಚಿಂಕಾರಗಳು ಮುಖ್ಯವಾದವು. ಈ ಪ್ರದೇಶದ ಅತಿಮುಖ್ಯ ಹಾಗೂ ವಿಶಿಷ್ಟ ಪ್ರಾಣಿ ಎಂದರೆ ಕಾಶ್ಮೀರಿ ಜಿಂಕೆ.

ಮಧ್ಯ ಭಾಗ: ವೃಕ್ಷರೇಖೆ ಮತ್ತು ರಸಭರಿತ ಹುಲ್ಲುಗಳ ಮೈದಾನ ಹಾಗೂ ಟಿಬೆಟಿನ ಒಣ ಮೈದಾನಗಳ ಭಾಗ. ಪರ್ವತ ಶ್ರೇಣಿಗಳಿಂದ ಸುತ್ತುವರಿದಿರುವ ಈ ಭಾಗ ವಾತಾವರಣದ ವೈಪರೀತ್ಯದಿಂದಾಗಿ ಪೌರಸ್ತ್ಯದೇಶಗಳ ಗುಂಪನ್ನು ಪುರಾತನ ಶೀತವಲಯದ ಗುಂಪಿನ ದೇಶಗಳಿಂದ ಬೇರ್ಪಡಿಸುತ್ತದೆ. ಈ ಭಾಗದ ಉತ್ತರಭಾಗದಲ್ಲಿ ಹೆಗ್ಗಣ (ಮೋಲ್), ನೀರಿಲಿ (ವಾಟರ್ ಶ್ರೂ), ಕುಂದಿಲಿ (ಮೌಸ್ ಹೇರ್), ಕೃಷ್ಣಮೃಗ, ಭರಲ್‍ಗಳೂ ದಕ್ಷಿಣದಲ್ಲಿ ನರಿ, ಬಾವಲಿ, ಮರಮೂಗಿಲಿ (ಟ್ರೀ ಶ್ರೂ), ಪುನುಗು ಬೆಕ್ಕು, ಮುಂಗುಸಿ, ಹಾರುಬೆಕ್ಕು, ಅಳಿಲುಗಳೂ ವಾಸಿಸುತ್ತವೆ.

ಈಶಾನ್ಯ ಭಾಗ: ಟಿಬೆಟ್ಟಿನ ಮೈದಾನಗಳು, ಲಡಾಕಿನಿಂದ ಭೂತಾನದವರೆಗಿನ ಕಾಶ್ಮೀರದ ಮೈದಾನಗಳು, ಉತ್ತರ ಸರಹದ್ದಿನ ಪ್ರಾಂತ್ಯಗಳು ಈ ಭಾಗದಲ್ಲಿ ಸೇರಿಕೊಂಡಿವೆ. ಕಡಿಮೆ ಮಳೆ, ಕಡುಚಳಿ ಇಲ್ಲಿಯ ಹವಾ ವೈಶಿಷ್ಯ. ಪ್ರಪಂಚದಲ್ಲಿ ಮರಳುಗಾಡು ಹಾಗೂ ಶೀತವಲಯಗಳೆರಡರ ಗುಣಗಳನ್ನೂ ಒಟ್ಟಿಗೆ ಪಡೆದಿರುವ ಪ್ರದೇಶವೆಂದರೆ ಇದೊಂದೇ. ಏಷ್ಯದ ಮರುಳುಗಾಡಿನಲ್ಲಿ ಕಂಡುಬರುವ ಕಾಡುಕತ್ತೆಗಳನ್ನು ಈ ಪ್ರದೇಶದಲ್ಲೂ ನೋಡಬಹುದು. ವೈವಿಧ್ಯಮಯ ಹವಾಗುಣ, ಸಸ್ಯ ಹಾಗೂ ಎತ್ತರ ಇವುಗಳಿಂದ ಈ ಭಾಗ ಪ್ರಾಣಿಗಳ ಹಂಚಿಕೆಯ ದೃಷ್ಟಿಯಿಂದ ಬಹು ಮುಖ್ಯವಾದ್ದು.

	3 ಅಸ್ಸಾಮ್, ಮಣಿಪುರ, ಮೇಘಾಲಯ, ಸಿಕ್ಕಿಮ್ ಮುಂತಾದ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿಗಳು ಹಿಮಾಲಯದ ಅರಣ್ಯಗಳ ಭಾಗದ ಪ್ರಾಣಿಗಳನ್ನೇ ಹೋಲುವುದರಿಂದ ಈ ಪ್ರದೇಶಗಳನ್ನೂ ಅರಣ್ಯಭಾಗಕ್ಕೆ ಸೇರಿಸಬಹುದು.

	ಪರ್ಯಾಯ ದ್ವೀಪಕಲ್ಪ ಪ್ರಾಂತ್ಯ: ಭಾರತದ ಅಧಿಕ ಭಾಗವನ್ನು ಆವರಿಸಿಕೊಂಡಿರುವ ಈ ಉಪವಿಭಾಗ ಗಂಗಾನದಿಯದಂಡೆಯಿಂದ ಕನ್ಯಾಕುಮಾರಿಯವರೆಗೂ ಹರಡಿದೆ. ಗಂಗಾನದಿಯ ದಕ್ಷಿಣಕ್ಕೆ ತ್ರಿಕೋಣಾಕಾರದಲ್ಲಿರುವ ಇದರಲ್ಲಿ ವಿಂಧ್ಯಪರ್ವತ ಶ್ರೇಣಿಗಳು ಅಡಕವಾಗಿದೆ. ದಕ್ಷಿಣಭಾರತದ ಎರಡೂಕಡೆ ಸಮುದ್ರಗಳಿದ್ದು ಅಂಚಿನಲ್ಲಿ ಕರಾವಳಿಪ್ರದೇಶ ಉಂಟು. ಪಶ್ಚಿಮ ಕರಾವಳಿಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟಗಳು, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೆ ಚಾಚಿಕೊಂಡಿದ್ದು ದಖ್ಖನ್ ಪ್ರಸ್ಥಭೂಮಿಯನ್ನು ಕರಾವಳಿಯಿಂದ ಬೇರ್ಪಡಿಸಿದೆ. ಪೂರ್ವತೀರದಲ್ಲಿ ಪೂರ್ವಘಟ್ಟಗಳು ತಮಿಳು ನಾಡಿನ ಕೆಲವೆಡೆ ಹರಡಿಕೊಂಡಿವೆ. ಹವೆ ಹಾಗೂ ಔನ್ನತ್ಯದ ದೃಷ್ಟಿಯಿಂದ ಇವೆರಡು ಘಟ್ಟ ಪ್ರದೇಶಗಳು ವಿಭಿನ್ನವಾಗಿವೆ. ಈ ಭಾಗದಲ್ಲಿ ನೀಲಗಿರಿ, ಪಳನಿ, ಬಾಬಾಬುಡನ್ ಗಿರಿ, ಬಿಳಿಗಿರಿರಂಗನ ಬೆಟ್ಟ ಮುಂತಾದ ಹಲವು ಬೆಟ್ಟಗಳೂ ಇವೆ. ದಕ್ಷಿಣದಲ್ಲಿ ಕೆಲವು ಪ್ರಾಣಿಗಳು ವೈಶಿಷ್ಟ್ಯಪೂರ್ಣವಾಗಿದ್ದು ಅವು ಭಾರತಕ್ಕೆ ಮಾತ್ರ ಮೀಸಲಾಗಿವೆ. ಚುಕ್ಕೆ ಜಿಂಕೆ (ಚಿತಲ್), ನೀಲ್ಗಾಯ್, ಕೃಷ್ಣಮೃಗ ನಾಲ್ಕು ಕೊಂಬಿನ ಚಿಗರೆ, ಅಲಸಿಕರಡಿ ಇವು ಇಲ್ಲಿಯ ಕೆಲವು ಮುಖ್ಯ ಪ್ರಾಣಿಗಳು. ಈ ವಿಭಾಗವನ್ನು ಕೂಡ ಹಿಮಾಲಯದ ಪ್ರಾಂತ್ಯದಂತೆ ಹಲವಾರು ಭಾಗಗಳಾಗಿ ವಿಂಗಡಿಸಬಹುದು.

	4 ಭಾರತದ ಮರುಭೂಮಿಯ ಪ್ರದೇಶ: ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳ ಕೆಲವು ಭಾಗಗಳನ್ನು ಆವರಿಸಿಕೊಂಡಿರುವ ಈ ಪ್ರದೇಶ ಪಾಕಿಸ್ತಾನ, ಆಫ್‍ಘಾನಿಸ್ತಾನಗಳ ಕಡೆ ಮುಂದುವರಿಯುತ್ತದೆ. ಇಲ್ಲಿಯ ಪ್ರಾಣಿಗಳು ಉಳಿದ ಪ್ರದೇಶಕ್ಕಿಂತ ಭಿನ್ನವಾಗಿದೆ. ಇವು ಪಶ್ಚಿಮದ ಮರಳುಗಾಡಿನ ಇತರ ಪ್ರದೇಶಗಳಿಂದ ವಲಸೆ ಬಂದಂಥವು. ಮರಳುಗಾಡಿನ ನರಿ, ಮೊಲ, ಜೆರ್‍ಬಿಲ್ ಇತ್ಯಾದಿಗಳು ಇಲ್ಲಿಯ ಮುಖ್ಯ ಪ್ರಾಣಿಗಳು. 

5 ಪಶ್ಚಿಮಘಟ್ಟಗಳು ಹಾಗೂ ಕರಾವಳಿ ಪ್ರದೇಶ: ಪಶ್ಚಿಮಘಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ದಟ್ಟ ಕಾಡುಗಳಿವೆ. ಸದಾಹಸುರಾಗಿರುವ ಎತ್ತರವಾದ ಮರಗಳು, ಬೆತ್ತ, ಬಿದಿರು ಮುಂತಾದವು ಇಲ್ಲಿ ಸರ್ವೆಸಾಮಾನ್ಯ. ಹಲವಾರು ಹಳ್ಳಗಳೂ ಚಿಕ್ಕ ನದಿಗಳೂ ಇಲ್ಲಿದೆ. ನೀಲಗಿರಿ, ಪಳನಿ, ಬಾಬಾಬುಡನ್ ಗಿರಿ, ಬಿಳಿಗಿರಿರಂಗಿನ ಬೆಟ್ಟ ಮುಂತಾದವು ಇಲ್ಲಿಯ ಮುಖ್ಯ ಗಿರಿಗಳು, ನೀಲಗಿರಿ ಮುಸುವ, ಮಕಾಕ್ ಕೋತಿ, ನೀಲಗಿರಿಯ ಕಂದು ಮುಂಗುಸಿ, ರಾಮಳಿಲು, ಕೆಂಜಳಿಲು, ಮಲಬಾರ್ ಪುನುಗು ಬೆಕ್ಕು, ಮುಳ್ಳಿಲಿ, ನೀರುನಾಯಿ, ಆನೆ, ಹುಲಿ ಇತ್ಯಾದಿ ಇಲ್ಲಿ ವಾಸಿಸುವ ಮುಖ್ಯ ಪ್ರಾಣಿಗಳು.

6 ಮುಖ್ಯ ಪರ್ಯಾಯ ದ್ವೀಪಕಲ್ಪ ಭಾಗ: ಮಧ್ಯಭಾರತ, ದಕ್ಷಿಣ ಪ್ರಸ್ಥಭೂಮಿ ಹಾಗೂ ಇನ್ನುಳಿದ ಎಲ್ಲ ಪ್ರದೇಶಗಳೂ ಈ ಭಾಗದಲ್ಲಿ ಸೇರಿಕೊಂಡಿವೆ. ಪಶ್ಚಿಮಘಟ್ಟಗಳು ನೈರುತ್ಯ ಮಾರುತಗಳನ್ನು ತಡೆಯುವುದರಿಂದ ಪ್ರಸ್ಥಭೂಮಿಯಲ್ಲಿ ಕಡಿಮೆ ಮಳೆ ಬೀಳುತ್ತದೆ. ಈ ಪ್ರದೇಶಗಳಲ್ಲಿ ಸಸ್ಯಗಳು ಕೆಲವಡೆ ಹುಲ್ಲುಗಾವಲುಗಳೂ ಉಂಟು, ಮೈದಾನ, ಬೆಟ್ಟಗುಡ್ಡಗಳು, ತಗ್ಗುಗಳು ಎಲ್ಲವೂ ಈ ಪ್ರದೇಶದಲ್ಲಿವೆ. ಗೆಜೆಲ್, ಚಿಗರೆ ಇವು ಸಾಮಾನ್ಯವಾಗಿದ್ದು ಇವುಗಳೊಂದಿಗೆ ಮುಂಗುಸಿ, ತೋಳ ವಿವಿಧ ರೀತಿಯ ಅಳಿಲು, ಮೊಲ, ಇಲಿ ಕಾಣದೊರೆಯುವುವು. ಪರ್ಣಪಾತಿ ಕಾಡುಗಳಲ್ಲಿ ಕಾಟಿ, ಕಡವೆ, ಚುಕ್ಕೆಜಿಂಕೆ ಕರಡಿ, ಕಾಡುನಾಯಿ ಉಂಟು. ತೇವಪೂರಿತ ಕಾಡುಗಳಲ್ಲಿ ಕಾಡಾನೆ, ಕಾಡಿ ಜೌಗುಜಿಂಕೆ ವಾಸಿಸುತ್ತವೆ. 

	7 ಗಂಗಾನದಿಯ ತೀರದ ಮೈದಾನ ಪ್ರದೇಶ: ಈ ಭಾಗದಲ್ಲಿ ಸಾಧಾರಣ ಮಳೆ ಬೀಳುತ್ತದೆ. ಚಳಿಗಾಲದಲ್ಲಿ ಉಷ್ಣತೆ ಕಡಿಮೆ. ಗೆಜೆಲ್ ಎಂಬ ಜಿಂಕೆ ಮುಖ್ಯವಾದ್ದು. ಪೂರ್ವಭಾಗದಲ್ಲಿ ತಂಪು ಪ್ರದೇಶಗಳಿವೆ. ಪಶ್ಚಿಮದಲ್ಲಿ ಬಂಗಾಳದ ಸುಂದರಬನವಿದೆ. ಇಲ್ಲಿ ಸದಾ ಹಸುರಾಗಿರುವ ಸಮೃದ್ಧ ಸಸ್ಯಸಂಪತ್ತನ್ನು ಕಾಣಬಹುದು. ಈ ಭಾಗದಲ್ಲಿ ಜೌಗುಜಿಂಕೆ ಹಾಗೂ ಹುಲಿಗಳುಂಟು.
	ಭಾರತದ ಪ್ರಾಣಿಸಂಪತ್ತನ್ನು ಕೂಲಂಕಷವಾಗಿ ಅಭ್ಯಸಿಸಿದರೆ ಸ್ತನಿಗಳ ಎಲ್ಲ ಗುಂಪುಗಳೂ ಇಲ್ಲಿರುವುದನ್ನು ಕಾಣುತ್ತೇವೆ. ಇವುಗಳ ಪೈಕಿ ಪ್ರಮುಖವಾದವು: ಪ್ರೈಮೇಟುಗಣಕ್ಕೆ ಸೇರುವ ವಿವಿಧ ಬಗೆಯ ಕೋತಿಗಳು. ವಾನರಗಳ ಪೈಕಿ ಗಿಬ್ಬನ್ ಒಂದೇ ಒಂದು ಪ್ರಭೇದ (ಹೈಲೊಬೇಟಸ್ ಹೂಲೂಕ್) ಅಸ್ಸಾಮಿನ ಕಾಡುಗಳಲ್ಲಿ ಕಂಡುಬರುತ್ತದೆ. ಸುಮಾರು 90 ಸೆಂ ಮೀ ಎತ್ತರವಾಗಿರುವ ಈ ಕೋತಿ ಮನುಷ್ಯನಂತೆ ಹಿಂಗಾಲುಗಳ ಮೇಲೆ ನೇರವಾಗಿ ನಿಂತುಕೊಳ್ಳಬಲ್ಲದು. ಇದರ ಕೈಗಳು ಕಾಲುಗಳಿಗಿಂತ ಹೆಚ್ಚು ಉದ್ದ. ಗಂಡು ಮತ್ತು ಮರಿಗಳು ಕಪ್ಪು ಬಣ್ಣದವಾದರೆ ಹೆಣ್ಣು ಹಳದಿ ಮಿಶ್ರಿತ ಬೂದುಬಣ್ಣದ್ದು. ಸಾಮಾನ್ಯವಾಗಿ 5-6 ಗಿಬ್ಬನ್‍ಗಳು ಗುಂಪುಗೂಡಿ ವ್ಯವಸ್ಥಿತ ಸಾಮಾಜಿಕ ಜೀವನ ನಡೆಸುತ್ತವೆ.

	ಪ್ರೈಮೇಟ್ ಗಣದ ಇನ್ನುಳಿದ ಭಾರತೀಯ ಪ್ರಭೇದಗಳೆಂದರೆ ಬಾಲವುಳ್ಳ ಕಪಿಗಳು. ಇವು ಸಯನೋಮಾರ್ಫ ಉಪಗಣ. ಸರ್ಕೊಪಿತೆಸಿಡೀ ಕುಟುಂಬಕ್ಕೆ ಸೇರಿವೆ. ಈ ಕುಟುಂಬವನ್ನು ಸರ್ಕೊಪಿತೆಸಿಡೀ ಮತ್ತು ಕೋಲೋಬಿನೀ ಎಂಬ ಎರಡು ಉಪಕುಟುಂಬಗಳಾಗಿ ವಿಂಗಡಿಸಲಾಗಿದೆ. ಮಕಾಕ್ ಕೋತಿಗಳು ಸರ್ಕೊಪಿತೆಸಿನೀ ಉಪಕುಟುಂಬಕ್ಕೆ ಸೇರುತ್ತವೆ. 

	ಇವುಗಳ ಪೈಕಿ ನಾಲ್ಕು ಪ್ರಭೇಧಗಳು ಇಲ್ಲುಂಟು. ಬಾನೆಟ್ ಮಂಗ (ಮಕಾಕ ರೇಡಿಯೇಟ) ಸುಮಾರು 60 ಸೆಂಮೀ ಎತ್ತರವಾಗಿದ್ದು 6-9 ಕೆಜಿ ಭಾರವಿದೆ. ಇದರ ಬಾಲ ಬಲು ಉದ್ದ; ಮುಖದ ಸುತ್ತ ಟೋಪಿಯಂತೆ ಕಪ್ಪು ಕೂದಲಿನ ಆವರಣ ಉಂಟು. ಮುಖದಲ್ಲಿ ಮಾತ್ರ ಕೂದಲು ಇರುವುದಿಲ್ಲ. ಕಾಲಮಾನವನ್ನು ಅವಲಂಬಿಸಿ ಕೂದಲಿನ ವರ್ಣಬದಲಾಗುತ್ತಿರುತ್ತದೆ. ಮರಗಳ ಮೇಲೆ ವಾಸಿಸುವ ಈ ಕೋತಿಗಳು 20-30ರ ಗುಂಪುಗಳಲ್ಲಿ ವಾಸಿಸುತ್ತವೆ. ಇವುಗಳಲ್ಲಿ ವ್ಯವಸ್ಥಿತ ಸಮಾಜ ಜೀವನ ಉಂಟು.

	ರೀಸಸ್ ಕೋತಿ (ಮಕಾಕ ಮುಲೆಟ) ಹಿಮಾಲಯ, ಅಸ್ಸಾಮ್, ಉತ್ತರ ಮತ್ತು ಮಧ್ಯಭಾರತದಲ್ಲಿ ಕಂಡು ಬರುವುದು, ಬರ್ಮ ಮತ್ತು ಆಗ್ನೇಯ ಏಷ್ಯದ ದೇಶಗಳಲ್ಲೂ ಕಂಡುಬರುತ್ತದೆ. ಬಾಲ ಚಿಕ್ಕದು, ಶರೀರ ಬಲಯುತವಾಗಿದೆ. ಕಟಭಾಗದಲ್ಲಿ ಕಿತ್ತಳೆಗೆಂಪು ಬಣ್ಣದ ಗುರುತುಂಟು. ಈ ಕೋತಿ ಕೇವಲ ಕಾಡುಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಗಳಲ್ಲಿ, ಚಿಕ್ಕಪುಟ್ಟ ಪಟ್ಟಣಗಳಲ್ಲಿ ರೈಲುನಿಲ್ದಾಣಗಳಲ್ಲಿ ಹಾಗೂ ಜನವಸತಿಯಿರುವ ಪ್ರದೇಶಗಳಲ್ಲಿ ಕೂಡ ಕಾಣಸಿಗುತ್ತದೆ.

	ಅಸ್ಸಾಮಿನ ಮಕಾಕ್ ಕೋತಿ ಹಿಮಾಲಯದ ಮಸ್ಸೂರಿಯಿಂದ ಪೂರ್ವದ ಸುಂದರಬನ, ಅಸ್ಸಾಮ್ ಹಾಗೂ ಬರ್ಮದ ಕಾಡುಗಳಲ್ಲಿ ವಾಸಿಸುತ್ತದೆ. ನೋಡಲು ರೀಸಸ್ ಕೋತಿಯಂತೆಯೇ ಇದೆ. ಬಾಲ ಸ್ವಲ್ಪ ಉದ್ದ.

	ಸಿಂಗಳೀಕ (ಮಕಾಲೀ ಸೈಕನಸ್) ಪಶ್ಚಿಮಘಟ್ಟಗಳ ಕಾರವಾರದಿಂದ ಹಿಡಿದು ಕನ್ಯಾಕುಮಾರಿಯವರೆಗಿನ ಬೆಟ್ಟಗಳಲ್ಲಿ ಕಾಣಬರುವ ಇನ್ನೊಂದು ಬಗೆಯ ಕೋತಿ. ಇದರ ಎತ್ತರ 50-60 ಸೆಂಮೀ. 25-35 ಸೆಂಮೀ ಉದ್ದದ ಬಾಲವಿದೆ. ಹೆಣ್ಣು ಗಂಡಿಗಿಂತ ಸ್ವಲ್ಪ ಚಿಕ್ಕದು. ಮುಖದ ಸುತ್ತ ಬೂದುಬಣ್ಣದ ಉದ್ದ ಕೂದಲಿನ ಅಯಾಲು ಉಂಟು. ಸ್ವಲ್ಪ ನಾಚಿಕೆ ಸ್ವಭಾವದ ಈ ಕೋತಿ ದಟ್ಟ ಅರಣ್ಯಗಳಲ್ಲಿ ವಾಸಿಸುತ್ತದೆ. 

	ಮುಸುವ ಅಥವಾ ಹನುಮಾನ್ ಕೋತಿ (ಲಂಗೂರ್) ಪ್ರೆಸ್ಟಿಟಿಸ್ ಎನ್‍ಟೆಲಸ್ ಎಂಬ ಪ್ರಭೇದಕ್ಕೆ ಸೇರುತ್ತದೆ. ಭಾರತಾದ್ಯಂತವೂ ಶ್ರೀಲಂಕಾದಲ್ಲೂ ಕಾಣಸಿಕ್ಕುವ ಕೋತಿ ಇದು. ಇದರ ಎತ್ತರ 60-75 ಸೆಂಮೀ. ತೂಕ 16-20 ಕೆಜಿ. ಉದ್ದ ಕಾಲುಗಳಿವೆ. ಬಾಲದ ಉದ್ದ ಸುಮಾರು 95 ಸೆಂಮೀ. ಮುಖ ಭಾಗದಲ್ಲಿ ಕಪ್ಪು ಕೂದಲೂ ಇತರ ಭಾಗಗಳಲ್ಲಿ ಬೂದು ಅಥವಾ ಕಂದುಬಣ್ಣದ ತುಪ್ಪಳವೂ ಉಂಟು. ಇವು ಕೂಡ ಮರದ ಮೇಲೆ ವಾಸಿಸುತ್ತಿದ್ದು ಸಮಾಜ ಜೀವನ ನಡೆಸುತ್ತವೆ. ಮುಸುವಗಳ ಇನ್ನೊಂದು ಪ್ರಭೇದ ಪ್ರೆಸ್ಬಿಟಿಸ್ ಪೈಲಿಯೇಟಸ್. ಇದು ಅಸ್ಸಾಮ್, ಬಾಂಗ್ಲಾದೇಶ ಮತ್ತು ಬರ್ಮಗಳಲ್ಲಿ ವಾಸಿಸುತ್ತದೆ. ನೀಲಗಿರಿ ಮುಸುವ (ಪ್ರೆಸ್ಬಿಟಿಸ್ ಜಾನಿ) ಭಾರತಕ್ಕೆ ಮಾತ್ರ ಸೀಮಿತವಾಗಿದ್ದು ಪಶ್ಚಿಮಘಟ್ಟಗಳ ನೀಲಗಿರಿ, ಬ್ರಹ್ಮಗಿರಿ, ಪಳನಿಬೆಟ್ಟಗಳಲ್ಲಿ ಕೊಡಗಿನಿಂದ ಕನ್ಯಾಕುಮಾರಿಯವರೆಗಿನ ಕಾಡುಗಳಲ್ಲಿ ಹರಡಿದೆ. ಇದರ ಎತ್ತರ 80 ಸೆಂಮೀ. ತೂಕ 11 ಕಿ.ಗ್ರಾಂ. ಬಾಲದ ಉದ್ದ 75-90 ಸೆಂಮೀ. ಮುಖ ಭಾಗದಲ್ಲಿ ಹಳದಿಬಣ್ಣದ ಹಾಗೂ ಶರೀರದ ಉಳಿದ ಭಾಗಗಳಲ್ಲಿ ಕಪ್ಪು ಇಲ್ಲವೆ ಬೂದು ಬಣ್ಣದ ಕೂದಲುಗಳುಂಟು.

ಕಾಡುಪಾಪಗಳ ಎರಡು ಪ್ರಭೇದಗಳು ಭಾರತದಲ್ಲಿದೆ. ಇವು ಬರ್ಮ ಮತ್ತು ಶ್ರೀಲಂಕಾಗಳಲ್ಲಿಯೂ ಕಂಡುಬರುತ್ತವೆ. ಲಜ್ಜಾಕಾಡುಪಾಪ (ನಿಕ್ಟಿಸೀ ಬಸ್ ಕೌಕಾಂಗ್) ಅಸ್ಸಾಮ್, ಬರ್ಮಗಳಲ್ಲಿ ಇದೆ. ತೆಳು ಕಾಡುಪಾಪ (ಲೋರಿಸ್ ಟಾರ್ಡಿಗ್ರೇಡಸ್) ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳಲ್ಲಿ ಕಂಡುಬರುತ್ತದೆ. ಉಳಿದ ಕೋತಿಗಳಿಗೆ ಹೋಲಿಸಿದರೆ ಇವುಗಳ ಗಾತ್ರ ಚಿಕ್ಕದು (ಉದ್ದ 25-40 ಸೆಂಮೀ) ಗುಂಡಾದ ತಲೆ, ಎರಡು ದೊಡ್ಡಕಣ್ಣುಗಳು, ಇವುಗಳ ಎರಡನೆಯ ಬೆರಳು ನಖವನ್ನೂ, ಉಳಿದ ಬೆರಳುಗಳು ಉಗುರುಗಳನ್ನೂ ಪಡೆದಿರುವುದು ಇದರ ಲಕ್ಷಣಗಳು.

	ಭಾರತ ಹಲವು ಮಾಂಸಾಹಾರಿ ಪ್ರಾಣಿಗಳಿಗೂ ಆವಾಸಸ್ಥಾನ. ಇವುಗಳ ಪೈಕಿ ಹುಲಿ ಪ್ರಮುಖವಾದ್ದು. ಹುಲಿಯ ವ್ಶೆಜ್ಞಾನಿಕ ಹೆಸರು ಪ್ಯಾಂಥೆರ್ ಟೈಗ್ರಿಸ್ ಇದು ವರ್ಣಮಯ ಪ್ರಾಣಿ. ದೇಹದ ಬಣ್ಣ ಕಂದು ಅಥವಾ ಕೇಸರಿ. ಕಪ್ಪು ಬಣ್ಣದ ಪಟ್ಟೆಗಳುಂಟು. ಅಸ್ಸಾಮ್, ಹಿಮಾಲಯ ಮತ್ತು ಪಶ್ಚಿಮಘಟ್ಟದ ಕಾಡುಗಳಲ್ಲಿ ಇವು ನೋಡ ಸಿಗುವುವು. ರಾಜಸ್ಥಾನ ಹಾಗೂ ಪಂಜಾಬದ ಮರಳು ಗಾಡಿನಲ್ಲಿ ಮಾತ್ರ ಹುಲಿಗಳಿಲ್ಲ. ಮಾನವನ ದುರಾಸೆ, ಕ್ರೀಡಾ ಮನೋಭಾವ ಇತ್ಯಾದಿಗಳಿಗೆ ಬಲಿಯಾಗುತ್ತಿದ್ದು ಒಮ್ಮೆ ಸಂಖ್ಯೆಯಲ್ಲಿ ಇಳಿಮುಖವಾಗಿದ್ದರೂ ಇಂದು ಹುಲಿ ಸಂರಕ್ಷಣಾ ಕಾಯಿದೆಯಿಂದಾಗಿ ಇದರ ಸಂಖ್ಯೆ ನಿಧಾನವಾಗಿ ಏರುತ್ತಿದೆ. 

	ಪ್ಯಾಂಥೆರ ಲಿಯೊ ಪ್ರಭೇದವೇ ಸಿಂಹ. ಭಾರತದಲ್ಲಿ ವಾಸಿಸುವ ಸಿಂಹ ಪರ್ಸಿಕ ಉಪಪ್ರಭೇದಕ್ಕೆ ಸೇರಿದೆ. ಇದರ ಉದ್ದ ಸು. 275 ಸೆಂಮೀ. ಪ್ರಾಚೀನ ಕಾಲದಲ್ಲಿ ಇದು ಉತ್ತರ ಹಾಗೂ ಮಧ್ಯ ಭಾರತದಲ್ಲಿದ್ದರೂ ಈಗ ಕೇವಲ ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಮಾತ್ರ ಕಂಡುಬರುತ್ತದೆ. ಅಲ್ಲಿ ಕೂಡ ಬಹುಸಂಖ್ಯೆಯಲ್ಲಿಲ್ಲ. ಗಂಡು ಸಿಂಹಗಳಿಗೆ ಮಾತ್ರ ತಲೆಯ ಸುತ್ತ ಉದ್ದ ಕೂದಲಿನ ಕೇಸರ ಉಂಟು. ಹೆಣ್ಣು ಸಿಂಹಗಳಿಗೆ ಕೇಸರಗಳಿಲ್ಲ. ಬಾಲದ ತುದಿಯಲ್ಲಿ ಕೂದಲಿನ ಗೊಂಡೆಯಿದೆ. ಕಾಲುಗಳ ಸಂದುಗಳಲ್ಲಿ ಹಾಗೂ ಹೊಟ್ಟೆಯ ತಳ ಭಾಗದಲ್ಲಿ ಉದ್ದಕೂದಲುಗಳಿವೆ. 	ಭಾರತದ ಚಿರತೆ ಪ್ಯಾಂಥೆರ ಪಾರ್ಡಸ್ ಪ್ರಭೇದಕ್ಕೆ ಸೇರಿದೆ. ಗಂಡು ಚಿರತೆ 215 ಸೆಂಮೀ ಹಾಗೂ ಹೆಣ್ಣು 185 ಸೆಂಮೀ ಉದ್ದ ಇವೆ. ಚಿರತೆಗಳು ಭಾರತದ ಎಲ್ಲ ಭಾಗಗಳಲ್ಲಿ ಹಾಗೂ ನೆರೆಯ ದೇಶಗಳಾದ ಶ್ರೀಲಂಕಾ, ಬರ್ಮ ಪಾಕಿಸ್ತಾನಗಳಲ್ಲೂ ಕಾಣಬರುತ್ತದೆ. ಇದು ತೆಳು ಮೈಯಿನ ಪ್ರಾಣಿ. ಮೈಬಣ್ಣ ನಸುಗೆಂಪು ಅಥವಾ ನಸುಗೆಂಪು ಮಿಶ್ರಿತ ಹಳದಿ. ಅಲ್ಲಲ್ಲಿ ಕರಿಯ ಮಚ್ಚೆಗಳುಂಟು. ನಿರ್ದಿಷ್ಟ ಅರಣ್ಯಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ರೀತಿಯ ಅರಣ್ಯಗಳಲ್ಲೂ ವಾಸಿಸುತ್ತದೆ. ತಾನು ಬೇಟೆಯಾಡಲು ಸಾಧ್ಯವಿರುವ ಎಲ್ಲ ಪ್ರಾಣಿಗಳನ್ನೂ ತಿನ್ನುತ್ತದೆ. ಚಿರತೆಯ ಮುಖ್ಯ ವೈರಿ ಹುಲಿ.

	ಹಿಮಚಿರತೆ (ಪ್ಯಾಂಥೆರ ಅನ್‍ಸಿಯ) ಹಿಮಾಲಯದ ಕಾಶ್ಮೀರ, ಭೂತಾನ, ಟಿಬೆಟ್ ಹಾಗೂ ಮಧ್ಯ ಏಷಿಯ ವಾಸಿ. ಇದು ಸಾಮಾನ್ಯ ಚಿರತೆಗಳಿಗಿಂತ ಚಿಕ್ಕ ಗಾತ್ರದ್ದು. 100-110 ಸೆಂಮೀ ಉದ್ದ ಇದೆ. ಇದರ ಮೂತಿ ಚಿಕ್ಕದು, ಮೈತುಂಬ ಮೃದುವಾದ ಬೂದು ಅಥವಾ ಬಿಳಿ ಬಣ್ಣದ ಕೂದಲುಗಳುಂಟು. ಕಪ್ಪು ಚುಕ್ಕೆಗಳೂ ಇವೆ. ತಲೆಯ ಹಾಗೂ ಕಾಲುಗಳ ಭಾಗದಲ್ಲಿ ಸ್ಪಷ್ಟವಾಗಿದ್ದು ಉಳಿದ ಭಾಗದಲ್ಲಿ ಮಸಕಾಗಿವೆ. ಸುಂದರವಾದ ಈ ಚಿರತೆಕೂಡ ಮನುಷ್ಯನ ಮೃಗಯಾವಿಹಾರದ ತೃಷೆಯನ್ನು ತಣಿಸಲು ಆಹಾರವಾಗುತ್ತಿದೆ.

	ಮೇಘ ಚಿರತೆ (ಕ್ಲೌಡೆಡ್ ಲೆಪರ್ಡ್-ನಿಯೋಫೀಲಿಸ್ ನೆಬ್ಯೂಲೋಸ್) ಸಿಕ್ಕಿಮ್, ಅಸ್ಸಾಮ್‍ಗಳಲ್ಲಿ ಕಂಡುಬರುವಂಥದು. ನೇಪಾಳ, ಭೂತಾನ, ಬರ್ಮ, ದಕ್ಷಿಣ ಚೀನ ಹಾಗೂ ಮಲೇಷಿಯಗಳಲ್ಲೂ ಕೂಡ ಇದೆ. ಬಾಲ ಸೇರಿಸಿದಂತೆ ಇದರ ಉದ್ದ 190-200 ಸೆಂಮೀ. ದೇಹದ ಉದ್ದಕ್ಕೆ ಹೋಲಿಸಿದರೆ ಕಾಲುಗಳು ಚಿಕ್ಕವು. ಇದರ ಕೋರೆ ಹಲ್ಲುಗಳು ಹುಲಿಚಿರತೆಗಳಿಗಿಂತ ಬಲಯುತವಾಗಿಯೂ ಉದ್ದವಾಗಿಯೂ ಇದೆ. ಈ ಚಿರತೆ ವೈಶಿಷ್ಯ ಪೂರ್ಣ ಹಾಗೂ ಸುಂದರ. ಮೈಬಣ್ಣ ಬೂದು ಅಥವಾ ಕಂದು. ತಲೆಯ ಭಾಗದಲ್ಲಿ ಎರಡು ದೊಡ್ಡ ಹಾಗೂ ಹಲವು ಚಿಕ್ಕ ಪಟ್ಟೆಗಳುಂಟು ಕುತ್ತಿಗೆ ಮತ್ತು ಬೆನ್ನುಭಾಗದಲ್ಲಿ ಹಾಗೂ ಬಾಲದ ಬುಡದಲ್ಲಿ ಈ ಪಟ್ಟೆಗಳು ಅಗಲವಾಗಿದ್ದು ಮೇಲಿನಿಂದ ಕೆಳಗೆ ಅಥವಾ ಮುಂಭಾಗದಿಂದ ಹಿಂಭಾಗಕ್ಕೆ ಹಾಯುತ್ತವೆ. ಬಾಲದ ಮಧ್ಯದಲ್ಲಿ ಮತ್ತು ಹಿಂಭಾಗದಲ್ಲಿ ಈ ಪಟ್ಟೆಗಳು ಒಂದರ ಪಕ್ಕ ಇನ್ನೊಂದರಂತೆ ಜೋಡಿಸಿದ ಉಂಗುರುಗಳಂತೆ ಕಾಣುತ್ತವೆ. ಕಾಲಿನ ಭಾಗದಲ್ಲಿ ಇವು ಚಿಕ್ಕ ಚುಕ್ಕಿಗಳಾಗಿ ಮಾರ್ಪಟ್ಟಿವೆ. 

	ಕಾಡುಬೆಕ್ಕುಗಳ ಪೈಕಿ ಪಂಚರಂಗಿ ಬೆಕ್ಕು (ಮಾರ್ಬಲ್ಟ್ ಕ್ಯಾಟ್-ಫೇಲಿಸ್ ಮಾರ್ಮೊರೇಟ) ಮುಖ್ಯವಾದ್ದು. ಇದು ಅಸ್ಸಾಮ್. ಸಿಕ್ಕಿಮ್‍ಗಳಲ್ಲೂ ಬರ್ಮ. ಮಲೇಷಿಯಾ ಮತ್ತು ಆಗ್ನೇಯ ಏಷ್ಯದ ಇತರ ದೇಶಗಳಲ್ಲೂ ಇದೆ. ಇದು ಮನೆ ಬೆಕ್ಕಿಗಿಂತ ಸ್ವಲ್ಪ ದೊಡ್ಡದು. ಗಾತ್ರದ ಹೊರತಾಗಿ, ನೋಡಲು ಸಾಮಾನ್ಯ ಚಿರತೆಯಂತೆಯೇ ಇದೆ. ಬಾಲದ ಪಟ್ಟೆಗಳು ಮೇಲ್ಭಾಗದಲ್ಲಿ ಮಾತ್ರ ಇವೆ.

	ಫೆಲಿಸ್ ಟೆಮ್ಮಿಂಕಿಯೈ ಪ್ರಭೇದದ ಕಾಡುಬೆಕ್ಕಿಗೆ ಬಂಗಾರದ ಬೆಕ್ಕು ಎಂದು ಹೆಸರು. ನೇಪಾಳ, ಸಿಕ್ಕಿಮ್, ಅಸ್ಸಾಮ್‍ಗಳಲ್ಲಿ ವಾಸಿಸುತ್ತದೆ. ಇದರ ಉದ್ದ 120 ಸೆಂ.ಮೀ. ಬಾಲದ ಉದ್ದ 45 ಸೆಂ.ಮೀ. ಸಾಮಾನ್ಯವಾಗಿ ಬಂಗಾರದ ಬಣ್ಣದ್ದು. ಆದರೂ ಕೆಲವು ಉಪಬಗೆಗಳಲ್ಲಿ ವರ್ಣವ್ಯತ್ಯಾಸಗಳುಂಟು. ಮುಖದಲ್ಲಿ ಮಾತ್ರ ಕಪ್ಪು ಅಥವಾ ಕಂದು ಪಟ್ಟೆಗಳಿವೆ.

	ಫೆಲಿಸ್ ಬೆಂಗಾಲೆನ್ಸಿಸ್ ಪ್ರಭೇದದ ಚಿರತೆಬೆಕ್ಕು(ಲೆಪರ್ಡ್ ಕ್ಯಾಟ್) ಇದು ಭಾರತದಾದ್ಯಂತ ಕಾಣಬಿಡುತ್ತದೆ. ಉದ್ದ ಸುಮಾರು 60 ಸೆಂ.ಮೀ. ಬಣ್ಣದಲ್ಲಿ ಚಿರತೆಯಂತೆಯೇ ಕಾಣುತ್ತದೆ. ಬೆಟ್ಟ, ಅಡವಿಗಳಲ್ಲಿ ವಾಸಿಸುತ್ತಿದ್ದು ಮರದ ಪೊಟರೆಗಳಲ್ಲಿ ಆಶ್ರಯ ಪಡೆಯುತ್ತದೆ. ಮತ್ಸ್ಯ ಭಕ್ಷಕ ಬೆಕ್ಕು (ಫೆಲಿಸ್ ವೈವರಿನ) ಬಂಗಾಳದ, ಉತ್ತರ ಪ್ರದೇಶ ಹಾಗೂ ಪಶ್ವಿಮಘಟ್ಟಗಳ ದಕ್ಷಿಣ ಭಾಗಗಳಲ್ಲಿ ದೊರೆಯುತ್ತವೆ.

	ಫೆಲಿಸ್ ಚಾವುಸ್ ಪ್ರಭೇದದ ಕಾಡುಬೆಕ್ಕು ಭಾರತದ ಎಲ್ಲ ಉಪಪ್ರಾಂತ್ಯಗಳಲ್ಲಿಯೂ ಕಂಡುಬರುತ್ತದೆ. ಕಂದು ಹಾಗೂ ಹಳದಿ ಮಿಶ್ರಿತ ವರ್ಣದ್ದು, ಗಾತ್ರದಲ್ಲಿ ಸಾಮಾನ್ಯ ಬೆಕ್ಕಿಗಿಂತ ಸ್ವಲ್ಪ ದೊಡ್ಡದು. ಬಾಲದ ತುದಿ, ದೇಹದ ಕೆಳಭಾಗ ಹಾಗೂ ಕಾಲುಗಳ ಮೇಲೆ ಮಾತ್ರ ವರ್ಣರಂಜಿತ ಪಟ್ಟೆಗಳುಂಟು, ಹುಲ್ಲುಗಾವಲುಗಳಲ್ಲಿ ಹಾಗೂ ಜೌಗು ಪ್ರದೇಶಗಳಲ್ಲಿ ಇದರ ವಾಸ. 

	ಮರಳುಗಾಡಿನ ಬೆಕ್ಕು (ಫೆಲಿಸ್ ಲಿಬಿಕ) ಭಾರತದ ಮರಳುಗಾಡಿನಲ್ಲಿ ಪುಣೆಯ ಸುತ್ತಮುತ್ತಲಿನ ಒಣ ಪ್ರದೇಶಗಳಲ್ಲಿ ಕಾಣಬರುತ್ತದೆ. ಗಾತ್ರದಲ್ಲಿ ಕಾಡುಬೆಕ್ಕಿನಷ್ಟೆ ಇದೆ. ಮೈಮೇಲಿರುವ ವಿಶಿಷ್ಟ ಚುಕ್ಕೆಗಳಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಕ್ಯಾರಕಲ್ (ಫೆಲಿಸ್ ಕ್ಯಾರಕಲ್) ಕಚ್ ಪ್ರದೇಶದ ಬೆಟ್ಟಗಳಲಿ,್ಲ ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶಗಳ ಒಣಕಾಡುಗಳಲ್ಲಿ ವಾಸಿಸುತ್ತದೆ. ಪಶ್ಚಿಮ ಏಷ್ಯ ಹಾಗೂ ಆಫ್ರಿಕಗಳಲ್ಲಿ ಕೂಡ ಇದೆ. ಇದು ಸುಮಾರು 60 ಸೆಂಮೀ ಉದ್ದದ ಬೆಕ್ಕು. ಅಗಲ ತಲೆ, ಕೂದಲು ಗೊಂಡೆಯುಳ್ಳ ಕಿವಿ ಇದರ ಮುಖ್ಯ ಲಕ್ಷಣಗಳು. ದಟ್ಟವಾದ ಮೃದು ಕೂದಲುಗಳು ಇಡೀ ದೇಹವನ್ನು ಆವರಿಸಿದೆ. ಕುರುಚಲು ಗಿಡಗಳಿಂದ ಕೂಡಿದ ಕಾಡುಗಳೇ ಇದರ ಮೆಚ್ಚಿನ ಆವಾಸ.

	ಲಿಂಕ್ಸ್ (ಫೆಲಿಸ್ ಲಿಂಕ್ಸ್) ಬೆಕ್ಕು ಕೂಡ ಕ್ಯಾರಕಲ್ಲಿನಂತೆಯೇ ಇದೆ. ಆದರೆ ಇದು ಅದಕ್ಕಿಂತ ಹೆಚ್ಚು ಉದ್ದ ಹಾಗೂ ಎತ್ತರ. ಇದರ ಬಾಲ ಕ್ಯಾರಕಲ್ಲಿನ ಬಾಲಕ್ಕಿಂತ ಚಿಕ್ಕದು. ಕೊರಳ ಸುತ್ತ ಕೂದಲುಂಟು. ಈ ಬೆಕ್ಕು ಸಿಂಧೂನದೀ ತೀರದಲ್ಲಿ ಲಡಕ್ ಮತ್ತು ಟಿಬೆಟ್‍ಗಳಲ್ಲಿ ಕಂಡುಬರುತ್ತವೆ.

ಬೇಟೆಚಿರತೆ (ಆಸಿನೋನಿಕ್ಸ್ ಜುಬಬೇಟಸ್) ಉತ್ತರ ಹಾಗೂ ಮಧ್ಯಭಾರತದ ಅಡವಿಯಲ್ಲಿ 50 ವರ್ಷಗಳ ಹಿಂದೆ ಹೇರಳವಾಗಿ ಕಂಡುಬರುತ್ತಿತ್ತು. ಆದರೆ ಇಂದು ಗತವಂಶಿ (ಆಫ್ರಿಕದಲ್ಲಿ ಮಾತ್ರ ಈಗ ಉಂಟು). ಅಂದಿನ ರಾಜಮಹಾರಾಜರುಗಳು ಜಿಂಕೆ ಬೇಟೆಯಲ್ಲಿ ಈ ಚಿರತೆಯನ್ನು ಬಳಸುತ್ತಿದ್ದರು.

ಪುನುಗಿನ ಬೆಕ್ಕು ವೈವರಿಡೀ ಕುಟುಂಬಕ್ಕೆ ಸೇರೆದೆ. ಸಾಮಾನ್ಯ ನೋಟಕ್ಕೆ ಇದು ಬೆಕ್ಕಿನಂತಿದ್ದರೂ ಉದ್ದ ದೇಹ. ಗಿಡ್ಡ ಕಾಲುಗಳಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಇದರ ಮೂತಿ ಬೆಕ್ಕಿನದ್ದಕ್ಕಿಂತ ಉದ್ದವಾಗಿದೆ. ಇದು ಮಿಶ್ರಾಹಾರಿ. ದಂತವಿನ್ಯಾಸ ಅದಕ್ಕೆ ತಕ್ಕಂತೆ ಮಾರ್ಪಾಟಾಗಿದೆ. ವೈರಿ ಆಕ್ರಮಣ ಮಾಡಿದಾಗ ವಿಶೇಷ ಗ್ರಂಥಿಯಿಂದ ಕೆಟ್ಟ ವಾಸನೆಯುಳ್ಳ ದ್ರವವನ್ನು ಸಿಂಪಡಿಸಿ ರಕ್ಷಣೆ ಮಾಡಿಕೊಳ್ಳುವುದು ಇದರ ವೈಶಿಷ್ಟ್ಯ. ಈ ದುರ್ವಾಸನಾಗ್ರಂಥಿ ಮಾರ್ಪಾಟಾದ ಗುದದ್ವಾರದ ಗ್ರಂಥಿ, ಅಸ್ಸಾಮಿನ ಕಾಡುಗಳಲ್ಲಿ ಪುನುಗು ಹುಲಿ (ಪ್ರೈಯೋನೊಡಾನ್ ಪಾರ್ಡಿಕಲರ್), ಭಾರತದ ಚಿಕ್ಕ ಪುನುಗುಬೆಕ್ಕು ಹಿಮಾಲಯದಿಂದ ಕನ್ಯಾಕುಮಾರಿವರೆಗೂ ವ್ಯಾಪಿಸಿವೆ. ಬಣ್ಣ, ದೇಹದ ಆಕಾರ, ಗಾತ್ರ, ಬಾಲದ ಉದ್ದ ಇವುಗಳಿಂದ ಪುನುಗಿನ ಬೆಕ್ಕುಗಳ ವಿವಿಧ ಪ್ರಭೇದಗಳನ್ನು ಗುರುತಿಸಲಾಗುತ್ತದೆ. 

ಮುಂಗುಸಿಗಳು ಪುನುಗಿನ ಬೆಕ್ಕನ್ನು ಹೋಲುವ ಆದರೆ ಗಾತ್ರದಲ್ಲಿ ಚಿಕ್ಕದಾಗಿರುವ ಮಾಂಸಹಾರಿಗಳು, ಇವು ಹರ್ಪೆಸ್ಟಿಡೀ ಕುಟುಂಬಕ್ಕೆ ಸೇರಿವೆ. ಮುಂಗುಸಿಗಳಲ್ಲಿ ಕಂದು ಮುಂಗುಸಿ (ಹೆರ್ಪೆಸ್ಪಿಸ್ ಫಸ್ಕಸ್) ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಉಳಿದವು ಸಾಮಾನ್ಯ ಮುಂಗುಸಿ ಅಥವಾ ಕೀರ (ಹೆರ್ಪೆಸ್ಪಿಸ್ ಎಡ್ವಾಡ್ರ್ಸಿ), ಏಡಿ ಭಕ್ಷಕ ಭಾರತದ ಚಿಕ್ಕ ಮುಂಗುಸಿ (ಹೆರ್ಪೆಸ್ಪಿಸ್ ಆರೋಪಂಕ್ಟಸ್), ಏಡಿ ಭಕ್ಷಕ ಮುಂಗುಸಿ (ಹೆರ್ಪೆಸ್ಪಿಸ್ ಆರವ). ಇವು ಭಾರತದಲ್ಲಿ ಹಾಗೂ ಬರ್ಮ, ಶ್ರೀಲಂಕಾ ಮೊದಲಾದ ದೇಶಗಳಲ್ಲಿ ವಾಸಿಸುತ್ತವೆ. 

	ಮಾಂಸಾಹಾರಿ ಸ್ತನಿಗಳ ಪೈಕಿ ನಾಯಿಗಳನ್ನು ಹಾಗೂ ಇವನ್ನು ಹೋಲುವ ಎಲ್ಲ ಪ್ರಾಣಿಗಳನ್ನೂ ಕೇನಿಡೀ ಕುಟುಂಬಕ್ಕೆ ಸೇರಿಸಲಾಗಿದೆ. ಕತ್ತೆಕಿರುಬ, ನರಿ, ತೋಳಗಳು ಈ ಕುಟುಂಬಕ್ಕೆ ಸೇರಿವೆ. ಭಾರತದಲ್ಲಿ ಪಟ್ಟೆ ಕತ್ತೆಕಿರುಬ (ಹೈಯೀನ ಸ್ಟ್ರಯೇಟ) ಮಾತ್ರ ಕಂಡುಬರುತ್ತದೆ. 150 ಸೆಂಮೀ ಉದ್ದದ ಈ ಪ್ರಾಣಿ ನೋಡಲು ನಾಯಿಯಂತೆಯೇ ಇದೆ. ಆದರೆ ಇದರ ದೇಹದ ಮೇಲೆ ಕಪ್ಪು ಪಟ್ಟೆಗಳಿವೆ.

	ತೋಳ (ಕೇನಿಸ್ ಲೂಪಸ್) ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಉಂಟು. ಗಾತ್ರದಲ್ಲಿ ಸಾಮಾನ್ಯ ನಾಯಿಗಿಂತ ತುಸು ದೊಡ್ಡದು. ಕುರುಚಲು ಕಾಡುಗಳಲ್ಲಿಯೂ ಅಭಯಾರಣ್ಯಗಳಲ್ಲಿಯೂ ಇದೆ. ಕಾಡಿನ ಹೊರ ಅಂಚಿನಲ್ಲಿರುವ ಊರುಗಳಿಂದ ಕೋಳಿಗಳನ್ನೂ ಚಿಕ್ಕ ಪ್ರಾಣಿಗಳನ್ನೂ ಕದ್ದು ತಿಂದು ಹೊಟ್ಟೆ ಹೊರೆಯುತ್ತದೆ.

	ನರಿಗಳ ಮೂರು ಪ್ರಭೇದಗಳು ಭಾರತದಲ್ಲುಂಟು. ಸಾಮಾನ್ಯ ನರಿ (ಕೇನಿಸ್ ಆರಿಯಸ್), ಕಂದುನರಿ (ವುಲ್ಫೆಸ್ ವುಲ್ಫೆಸ್) ಹಾಗೂ ಗುಳ್ಳೆನರಿ (ವುಲ್ಫೆಸ್ ಬೆಂಗಾಲೆನ್ಸಿಸ್) ಇವುಗಳ ಪೈಕಿ ಕಂದುನರಿ ಉತ್ತರ ಭಾಗಕ್ಕೆ ಮಾತ್ರ ಸೀಮಿತವಾಗಿದ್ದು ಉಳಿದವು ಭಾರತದ ಎಲ್ಲ ಕಡೆಗಳಲ್ಲೂ ಕಾಣಸಿಗುತ್ತವೆ. ಇವು ತೋಳಗಳಿಗಿಂತ ಚಿಕ್ಕವು; ದೇಹದ ಉದ್ದ 40 ಸೆಂಮೀ. 

ಅಲಸಿ ಕರಡಿ (ಮೆಲರ್ಸಸ್ ಅರ್ಸಿನಸ್), ಕಂದು ಕರಡಿ (ಅರ್ಸಸ್ ಅರ್ಕ್‍ಟೋಸ್) ಮತ್ತು ಹಿಮಾಲಯದ ಕಪ್ಪು ಕರಡಿ (ಸೆಲಿನಮಾರ್ಕ್ ಟೋಸ್ ಟಿಬೇಟಾನಸ್)-ಇವು ಮೂರು ಭಾರತದಲ್ಲಿ ಇರುವ ಪ್ರಭೇದಗಳು. ಇವುಗಳ ಪೈಕಿ ಮೊದಲನೆಯದು ಭಾರತದ ಎಲ್ಲ ಭಾಗಗಳಲ್ಲೂ, ಉಳಿದೆರಡು ಹಿಮಾಲಯ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಾಣಸಿಗುತ್ತವೆ. ಕಾಡಿನ ಅಂಚಿನಲ್ಲಿ ಇವುಗಳ ವಾಸ. ಅಲಸಿ ಕರಡಿ 60ರಿಂದ 80 ಸೆಂ.ಮೀ. ಉದ್ದವಿದ್ದರೆ ಉಳಿದೆರಡು ಪ್ರಭೇದಗಳು 150 ರಿಂದ 180 ಸೆಂ.ಮೀ. ಉದ್ದ ಇವೆ. ಇವುಗಳಲ್ಲೆಲ್ಲ ಮೂತಿಯನ್ನುಳಿದು ಮೈತುಂಬ ದಟ್ಟ ಕೂದಲುಗಳುಂಟು,

	ದೇಹ ರಚನೆಯಲ್ಲಿ ಕರಡಿಗಳನ್ನು ಹೋಲುವ ಇನ್ನೊಂದು ಪ್ರಾಣಿ ಪಾಂಡಾ. ಭಾರತದಲ್ಲಿರುವಂಥದು ಐಲ್ಯೂರಸ್ ಫಲ್ಗೆನ್ಸ್ ಎಂಬ ಪ್ರಭೇದಕ್ಕೆ ಸೇರುವ ಕೆಂಪು ಪಾಂಡ ಮಾತ್ರ. ಹಿಮಾಲಯದ ಕೆಲವು ಭಾಗಗಳಲ್ಲಿ, ನೇಪಾಳ, ಸಿಕ್ಕಿಂಗಳಲ್ಲಿ ಮಾತ್ರ ಇದು ಗೋಚರಿಸುತ್ತದೆ. 

	ಮಸ್ಟೆಲಿಡೀ ಕುಟುಂಬಕ್ಕೆ ಸೇರಿದ ನೀರುನಾಯಿಗಳು ಭಾರತದಲ್ಲುಂಟು. ಬಲಯುತ ಸ್ನಾಯು ಪುಷ್ಟಬಾಲ, ಹುಟ್ಟಿನಂತೆ ಮಾರ್ಪಾಡಾದ ಪಾದ, ಮುಂಗಾಲಿಗಿಂತ ಬಲವಾದ ಹಿಂಗಾಲುಗಳು, ವಿಶಿಷ್ಟವಾದ ಮೀಸೆ ಇವು ನೀರು ನಾಯಿಯ ಲಕ್ಷಣಗಳು. ಲುಟ್ರ ಲುಟ್ರ ಲುಟ್ರ ಪರ್‍ಸ್ಟಿಸಿಲ್ಲೇಟ, ಅಯೋನಿಕ್ಸ್ ಸಿನೆರಿಯ ಎಂಬ ಮೂರು ಪ್ರಭೇದಗಳು ಭಾರತದಲ್ಲಿದ್ದು, ಮೊದಲ ಎರಡು ಪ್ರಭೇದಗಳನ್ನು ದೇಶದ ಎಲ್ಲ ಭಾಗಗಳಲ್ಲೂ, ಮೂರನೆಯದನ್ನು (ಪಂಜರಹಿತ ನೀರುನಾಯಿ) ಕುಲುಕಣಿವೆ, ಅಸ್ಸಾಮಿನ ಗುಡ್ಡಗಾಡು ಪ್ರದೇಶಗಳು, ನೀಲಗಿರಿ, ಪಲನಿ ಮತ್ತು ಕೊಡಗುಗಳಲ್ಲೂ ಕಾಣಬಹುದು. ಅಯೋನಿಕ್ಸ್ ನೀರುನಾಯಿ 45-55 ಸೆಂಮೀ ಉದ್ದವಿದ್ದು ಉಳಿದ ನೀರು ನಾಯಿಗಳಿಗಿಂತ ಚಿಕ್ಕದೆನಿಸಿದೆ. ಉಳಿದವು 60-85 ಸೆಂಮೀ ಉದ್ದ ಇವೆ. ಮಾರ್ಟಿನ್ ಎಂಬ ಇನ್ನೊಂದು ಪ್ರಾಣಿ ಇದೇ ಕುಟುಂಬಕ್ಕೆ ಸೇರುತ್ತದೆ. ಮಾರ್ಟಿನ್‍ಗಳ ಪೈಕಿ ಹಿಮಾಲಯದ ಮಾರ್ಟಿನ್ ಪ್ಲೂವಿಗುಲ ಹಾಗೂ ನೀಲಗಿರಿಯ ಮಾರ್ಟಿನ್‍ಗ್ಟಾಡ್ಕಸ್ - ಎಂಬ ಪ್ರಭೇದಗಳಿವೆ. ಇವು ಸಾಮಾನ್ಯ ನೋಟಕ್ಕೆ ನೀರುನಾಯಿಯಂತೆ ಕಂಡರೂ ನೆಲದ ಮೇಲೆ ವಾಸಿಸುವಂಥ ಪ್ರಾಣಿಗಳು, ನೀರುನಾಯಿಗಳ ಬಾಲ ಮೊನಚಾಗಿದ್ದರೆ ಇವುಗಳದು ಮೊಂಡು.

	ವೀಸಲ್‍ಗಳೂ ನೀರುನಾಯಿಯನ್ನು ಹೋಲುವ ಪ್ರಾಣಿಗಳು, ಇವು ನೆಲ ಹಾಗೂ ಮರಗಳ ಮೇಲೆ ವಾಸಿಸಬಲ್ಲವು. ಹಿಮಾಲಯದ ತಪ್ಪಲುಗಳಲ್ಲಿಯೇ ಅಲ್ಲದೆ ಮಧ್ಯ ಏಷ್ಯ ಹಾಗೂ ಬರ್ಮಗಳಲ್ಲಿಯೂ ಕಂಡುಬರುತ್ತವೆ. 

	ಹಿಮಾಲಯದ ಅಸ್ಸಾಮಿನಲ್ಲಿ ಬ್ಯಾಡ್ಜರುಗಳುಂಟು, ಚೀನ, ಬರ್ಮ ಮತ್ತು ಇಂಡೊನೇಷ್ಯಗಳಲ್ಲೂ ಇವೆ. ಅನ್ವೇಷಕ ಬ್ಯಾಡ್ಜರ್ (ಮೆಲೊಗೇಲ್ ಮೊಶ್ಚಾಟ) ಹಾಗೂ ಹಂದಿಬ್ಯಾಡ್ಜರ್ (ಆರ್ಕ್‍ಟೋನಿಸ್ ಕಾಲರಿಸ್) ಎಂಬ ಎರಡು ಪ್ರಭೇದಗಳು ಭಾರತದಲ್ಲಿದೆ. ರಾಟೆಲ್ ಅಥವಾ ಜೇನುಬ್ಯಾಡ್ಜರ್, (ಮೆಲ್ಲಿವೊರ ಕೆಪೆನ್ಸಿಸ್) ಎಂಬುದು ಭಾರತದಾದ್ಯಂತ ಸಿಗುವ ಇನ್ನೊಂದು ಪ್ರಾಣಿ.

	ಭಾರತದ ಕೀಟಭಕ್ಷಕ ಸ್ತನಿಗಳಲ್ಲಿ ನಾಲ್ಕು ವಿಧಗಳಿವೆ; ಮರಮೂಗಿಲಿ (ಟ್ರೀಶ್ರ್ಯೂ), ಮುಳ್ಳು ಹಂದಿ, (ಹೆಡ್ಜ್ ಹಾಗ್) ಇವು ಕ್ರಮವಾಗಿ ಟುಲಿಪಿಡೀ, ಎರಿನೇಸೈಯಿಡೀ ಟಾಲ್ಪಡೀ ಮತ್ತು ಸೊರಿಸಿಡೀ ಕುಟುಂಬಗಳಿಗೆ ಸೇರಿವೆ. ಮರ ಮೂಗಿಲಿಗಳ ಪೈಕಿ ಅನಾತಾನ ಇಲಿಯೋಟಿ ಹಾಗೂ ಟುಪಾಯಗ್ಲಿಸ್ ಎಂಬ ಎರಡು ಪ್ರಭೇದಗಳು ಭಾರತದಲ್ಲಿದೆ. ದಕ್ಷಿಣಭಾರತದ ಒಣಕಾಡುಗಳಲ್ಲಿ ಇವುಗಳ ವಾಸ. ಮುಳ್ಳು ಹಂದಿ ಪೈಕಿ ಹೆಮಿಎಕೈನಸ್ ಆರಿಟಸ್ ಹಾಗೂ ಪ್ಯಾರಾಎಕೈನಸ್ ಮೈಕ್ರೋಪಸ್ ಎಂಬ ಎರಡು ಪ್ರಭೇದಗಳು ಒಣ ಪ್ರದೇಶಗಳಿಗೆ ಹಾಗೂ ರಾಜಸ್ಥಾನದ ಮರಳುಗಾಡಿಗೆ ಮಾತ್ರ ಸೀಮಿತ. ಮಖಮಲ್ ಹೆಗ್ಗಣದ (ಟಾಲ್ಪ ಮೈಕ್ರೊರ) ಎರಡು ಉಪ ಪ್ರಭೇದಗಳು ಇಲ್ಲುಂಟು, ನೆಲಮೂಗಿಲಿಗಳ ಪೈಕಿ ಸಂಕಸ್ ಮುರಿನಸ್ ಎಂಬ ಪ್ರಭೇದ ಮಾತ್ರ ಇದ್ದು ಇವು ದೇಶದ ಎಲ್ಲ ಭಾಗಗಳಲ್ಲೂ ಹರಡಿವೆ.

	ಬಾವುಲಿಗಳ ಪೈಕಿ ದೈತ್ಯಬಾವುಲಿ ಹಾಗೂ ಚಿಕ್ಕ ಬಾವುಲಿಗಳೆರಡೂ (ಮೆಗಕೈರಾಪ್ಟರ ಮತ್ತು ಮೈಕ್ರೊ ಕೈರಾಪ್ಟರ) ಇವೆ. ಚಿಕ್ಕ ಬಾವುಲಿಗಳು ಕೀಟಭಕ್ಷಕ ಪ್ರಾಣಿಗಳು, ಬಾವುಲಿಗಳ ಹನ್ನೊಂದು ಪ್ರಭೇದಗಳು ದೇಶದಲ್ಲಿ ಇವೆಯಾದರೂ ಇವುಗಳ ಪೈಕಿ ಎಪ್ಪಿಸಿಕಸ್ ಸ್ಕೋಟನಸ್ ಎಂಬ ಪ್ರಭೇದ ಈ ದೇಶಕ್ಕೆ ಮತ್ರ ಮೀಸಲು ಉಳಿದವು ದಕ್ಷಿಣ ಭಾರತದ ವಿವಿಧ ಭಾಗಗಳಲ್ಲೂ ದಕ್ಷಿಣ ಆಫ್ರಿಕ ಹಾಗೂ ಆಗ್ನೇಯ ಏಷ್ಯದ ದೇಶಗಳಲ್ಲೂ ಕಂಡುಬರುತ್ತದೆ.

	ದಂಶಕ ಪ್ರಾಣಿಗಳ ಎಲ್ಲ ಗುಂಪುಗಳೂ ಭಾರತದಲ್ಲಿವೆ. ಇವುಗಳ ಪೈಕಿ ಮುಖ್ಯವಾದವು. ಅಳಿಲು, ಮಾರ್ಮಟ್, ಇಲಿ ಮತ್ತು ಹೆಗ್ಗಣಗಳು, ಅಳಿಲುಗಳ ಪೈಕಿ ಹಾರುವ ಆಳಿಲು ಸೋಜಿಗದ ಪ್ರಾಣಿ. ಇದರಲ್ಲಿ ಸಾಮಾನ್ಯವಾಗಿ ಎರಡು ಬಗೆಗಳುಂಟು. ಮೊದಲನೆಯದು 45 ಸೆಂ ಮೀ ಉದ್ದವಿದೆಯಾದರೆ ಎರಡನೆಯದು 25-30 ಸೆಂಮೀ ಉದ್ದವಿದೆ. ಇವುಗಳಲ್ಲಿ ಮೊದಲು ಗುಂಪಿನ ಕಾಶ್ಮೀರಿ ಹಾರುವ ಅಳಿಲು (ಯುಪೆಟಾರಸ್ ಸಿನೇರಿಯಸ್) ಕಾಶ್ಮೀರಿ ಪ್ರಾಂತ್ಯ ಹಾಗೂ ಸಿಕ್ಕಿಮ್‍ಗಳಲ್ಲಿಯೂ ಕಂದು ಬಣ್ಣದ ಹಾರುವ ಅಳಿಲು ದಕ್ಷಿಣ ಭಾರತ ಮತ್ತು ಗಂಗಾ ನದಿಯ ಉತ್ತರ ಭಾಗಗಳಲ್ಲೂ ದೊರೆಯುತ್ತವೆ. ಚಿಕ್ಕ ಹಾರು ಅಳಿಲುಗಳಲ್ಲಿ ನಾಲ್ಕು ಪ್ರಭೇದಗಳಿದ್ದು ಇವು ಭಾರತದ ವಿವಿಧ ಭಾಗಗಳಲ್ಲಿ ವಾಸಿಸುತ್ತವೆ. ಸಾಮಾನ್ಯ ಅಳಿಲುಗಳ ಪೈಕಿ 3 ಪ್ರಭೇದಗಳು ಭಾರತದಲ್ಲಿವೆ. ಕೇಶಳಿಲು (ರಟೂಫ ಇಂಡಿಕ) ಪಶ್ಚಿಮ ಘಟ್ಟಗಳಲ್ಲಿ, ದಕ್ಷಿಣ ಮತ್ತು ಮಧ್ಯಭಾರತದ ಇತರ ಕಾಡುಗಳಲ್ಲಿ ದೊರೆಯುತ್ತದೆ. ಹಿಮಾಲಯದ ಅಳಿಲುಗಳಲ್ಲಿ ಎರಡು ಪ್ರಭೇದಗಳಿದ್ದು ಈ ಎರಡೂ ಹಿಮಾಲಯ ಉಪ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಹಾಗೂ ಸುತ್ತಮುತ್ತಲಿನ ದೇಶಗಳಲ್ಲಿ ಕಂಡುಬರುತ್ತದೆ. ರಾಮಳಿಲು ಅಥವಾ ಪಟ್ಟೆ ಅಳಿಲುಗಳ ಎರಡು ಪ್ರಭೇದಗಳು ಭಾರತದಲ್ಲಿದ್ದು ಫುನಂಬುಲಸ್ ಪೆನ್ನಾಟಿ ಈ ದೇಶಕ್ಕೆ ಮಾತ್ರ ಸೀಮಿತ. ಬಿಲವಾಸಿ ಅಳಿಲುಗಳಲ್ಲಿ ಮಾರ್ಮೋಟ ಕಾಡೇಟ ಎಂಬ ಎರಡು ಪ್ರಭೇದಗಳಿದ್ದು ಇವು ಉತ್ತರ ಭಾರತದಲ್ಲಿ ಕಂಡುಬರುತ್ತದೆ. 

	ಜಿಂಕೆ ಇಲಿಗಳು (ಜೆರ್ಬಿಲ್) ನೋಡಲು ಇಲಿಗಳಂತೆಯೇ ಇದ್ದರೂ ಇವುಗಳ ರೋಮಯುಕ್ತ ಬಾಲಗಳಿಂದ ಇವನ್ನು ಸುಲಭವಾಗಿ ಗುರುತಿಸಬಬಹುದು. ಭಾರತದಲ್ಲಿ ಜಿಂಕೆ ಇಲಿಗಳ ಎರಡು ಪ್ರಭೇದಗಳಿವೆ. ಇವುಗಳ ಪೈಕಿ ಟಟೇರ ಇಂಡಿಕ ಎಂಬುದು ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ದೊರೆಯುತ್ತದೆ. ಮರಿಯೋನಸ್ ಹರಿಯಾನಿ ಮರಳುಗಾಡಿಗೆ ಮಾತ್ರ ಮೀಸಲು.

	ಹೆಗ್ಗಣಗಳ ಪೈಕಿ ಎರಡು ಪ್ರಭೇದಗಳು ಭಾರತದಲ್ಲಿವೆ. ಬ್ಯಾಂಡಿಕೂಟ ಬೆಂಗಾಲೆನ್ಸಿಸ್ ಎಂಬುದು ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ನಿಸೊಕಿಯ ಇಂಡಿಕ ಎಂಬುದು ಮರಳುಗಾಡು ಮತ್ತು ಒಣಹವೆ ಇರುವ ಪ್ರದೇಶಗಳಲ್ಲೂ ಕಾಣಬರುತ್ತದೆ. ಮಿಲ್ಲಾರ್ಡಿಯ ಮೆಲ್ಟಡ್ ಎಂಬ ಮತ್ತೊಂದು ಪ್ರಭೇದ ಬ್ಯಾಂಡಿಕೂಟ ಬೆಂಗಾಲೆನ್ಸಿಸ್‍ಗಿಂತ ಚಿಕ್ಕಗಾತ್ರದ್ದು: ಪಶ್ಚಿಮ ಮತ್ತು ದಕ್ಷಿಣ ಭಾರತದ ಹೊಲಗಳಲ್ಲಿ ವಾಸಿಸುತ್ತದೆ. 

	ಭಾರತದ ಇಲಿಗಳ ಪೈಕಿ ಮಸ್ ಬೂಡುಗಾ, ಮಸ್ ಮಸ್ಕುಲಸ್, ಮಸ್ ಪ್ಲಾಟಿಥ್ರಿಕ್ಸ್, ವ್ಯಾಂಡಲೂರಿಯ ಓಲರÉೀಸಿಯ ಗೋಲಂಡ ಎಲಿಯೋಟೈ, ರ್ಯಾಟಸ್ ಬ್ಲಾನ್ ಫೋರ್ಡಿಯೈ ರ್ಯಾಟಸ್, ರ್ಯಾಟಸ್ ನಾರ್ವಿಜಿಕಸ್ ಮತ್ತು ಬ್ಯಾಂಡಿಕೂಟ ಇಂಡಿಕ ಎಂಬವು ಮುಖ್ಯ ಪ್ರಭೇದಗಳು, ಆಕಾರ, ಗಾತ್ರ, ತಲೆ, ಬಾಲ ಬಣ್ಣ ಇತ್ಯಾದಿಗಳಿಂದ ಇವನ್ನು ಸುಲಭವಾಗಿ ಗುರುತಿಸಬಹುದು. ಚಿಕ್ಕ ಬಾಲವಿರುವ ಅಲ್ಟೀಕೋಲ ರಾಯಲಿಯೈ ಎಂಬ ಪ್ರಭೇದ ಹಿಮಾಲಯದ ಉಪಪ್ರಾಂತ್ಯದಲ್ಲಿ ಕಂಡುಬರುತ್ತದೆ. ಬಿದಿರಿಲಿ (ಕನ್ನೊನಿಮಸ್ ಬೇಬ್ಭೆಡಿಯಸ್) ಹಿಮಾಲಯದ ತಪ್ಪಲು, ಅಸ್ಸಾಮ್. ಭೂತಾನ, ಸಿಕ್ಕಿಮ್‍ಗಳಲ್ಲಿ ಹಾಗೂ ಬರ್ಮಗಳಲ್ಲಿ ಸಿಗುತ್ತದೆ. ಕಣೆ ಹಂದಿಗಳೂ ರಾಡೆಂಷಿಯ ಗುಂಪಿಗೇ ಸೇರುತ್ತವೆ. ಹಿಸ್ಟ್ರಿಕ್ಸ್ ಇಂಡಿಕ ಹಾಗೂ ಹಿಸ್ಟ್ರಿಕ್ಸ್ ಹಾಜ್‍ಸೋನಿ ಎಂಬ ಎರಡು ಪ್ರಭೇದಗಳು ಈ ದೇಶದಲ್ಲಿವೆ.
	ಮೊಲಗಳ ಎರಡು ಜಾತಿಗಳು ನಮ್ಮ ದೇಶದಲ್ಲಿ ಇವೆ. ಲೀಪಸ್ ಹಾಗೂ ಓರಿಕ್ಟೊಲ್ಯಾಗಸ್ ಎಂಬ ಈ ಜಾತಿಗಳ ವಿವಿಧ ಪ್ರಭೇದಗಳು ದೇಶದ ಎಲ್ಲ ಭಾಗಗಳ ಕಾಡುಗಳಲ್ಲಿ, ಹುಲ್ಲುಗಾವಲುಗಳಲ್ಲಿ ವಾಸಿಸುವುವು. ಹಿಮಾಲಯದ ಮೊಲ (ಓಕೊಟೋನ ರಾಯಲಿ) ಹಿಮಾಲಯದ ಸುತ್ತಮುತ್ತ ಸಿಕ್ಕುತ್ತದೆ.
	ಭಾರತ ಆನೆಗಳಿಗೂ ಪ್ರಸಿದ್ಧ. ಆಫ್ರಿಕದ ಆನೆಗಿಂತ ಸ್ವಲ್ಪ ಚಿಕ್ಕಗಾತ್ರದ ಭಾರತದ ಆನೆ ಪಶ್ಚಿಮ ಘಟ್ಟಗಳಲ್ಲಿ, ಮೈಸೂರಿನ ದಕ್ಷಿಣ ಭಾಗದ ಕಾಡುಗಳಲ್ಲಿ, ಹಿಮಾಲಯ, ಅಸ್ಸಾಮ್‍ಗಳಲ್ಲಿ ಕಾಣಬರುತ್ತದೆ. ಶ್ರೀಲಂಕಾ, ಬರ್ಮ, ಮಲಯ ಪರ್ಯಾಯ ದ್ವೀಪಗಳಲ್ಲೂ ಇವನ್ನು ಕಾಣಬಹುದು.
	ಗೊರಸುಳ್ಳ ಪ್ರಾಣಿಗಳ ಪೈಕಿ ಹಲವು ಪ್ರಭೇದಗಳು ಭಾರತದಲ್ಲಿ ವಾಸಿಸುತ್ತವೆ. ಈ ಗುಂಪಿಗೆ ಹಸು, ಎಮ್ಮೆ, ಆಡು, ಕುರಿ, ಕತ್ತೆ, ಕುದುರೆ ಮುಂತಾದ ಸಾಕುಪ್ರಾಣಿಗಳೂ ಚಿಗರೆ. ಜಿಂಕೆ, ಖಡ್ಗಮೃಗ ಇತ್ಯಾದಿ ಕಾಡುಪ್ರಾಣಿಗಳೂ ಸೇರುತ್ತವೆ. ಕಚ್ ಪ್ರದೇಶದ ಮರಳುಗಾಡಿಗೆ ಮಾತ್ರ ಸೀಮಿತವಾದ ಇದೊಂದು ವಿಶಿಷ್ಟ ಪ್ರಾಣಿ. ಖಡ್ಗಮೃಗಗಳ ಸಂಖ್ಯೆ ಇಂದು ಭಾರತದಲ್ಲಿ ಕಡಿಮೆ. ಪ್ರಾಗೈತಿಹಾಸಿಕ ಪುರಾವೆಗಳಿಂದ ಪ್ರಾಚೀನ ಭಾರತದಲ್ಲಿ ಕನಿಷ್ಠ ನಾಲ್ಕು ಪ್ರಭೇದಗಳಾದರೂ ವಾಸಿಸುತ್ತಿದ್ದವು ಎಂದು ತಿಳಿದುಬರುತ್ತದೆ. ಈಗ ಬದುಕುಳಿದಿರುವುದು ಒಂದು ಕೊಂಬಿನ (ರೈನಾಸಿರಸ್ ಯೂನಿಕಾರ್ನಿಸ್) ಪ್ರಭೇದ ಮಾತ್ರ. ಹಿಂದೆ ಗಂಗಾನದಿಯ ತೀರದಲ್ಲಿ ಅಸ್ಸಾಮ್, ಪಶ್ಚಿಮ ಬಂಗಾಳಗಳಲ್ಲಿ ದೊರೆಯುತ್ತಿದ್ದರೂ ಇಂದು ಕೇವಲ ಅಸ್ಸಾಮ್ ಮತ್ತು ಪಶ್ಚಿಮ ಬಂಗಾಳದ ಕಾಡುಗಳಿಗೆ ಮಾತ್ರ ಇದು ಸೀಮಿತವಾಗಿದೆ. ಜೌಗು ತುಂಬಿರುವ ಕಾಡುಗಳಲ್ಲಿ ಇದರ ವಾಸ.
	ಕಾಟಿ (ಬಾಸ್ ಗೌರಸ್) ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮಧ್ಯ ಹಾಗೂ ಪೂರ್ವದ ರಾಜ್ಯಗಳಲ್ಲಿ ವಾಸಿಸುತ್ತದೆ. ಬಣ್ಣ, ಕೂದಲು ಹಾಗೂ ನಿಲುವುಗಳಿಂದ ಸಾಮಾನ್ಯ ಎತ್ತುಗಳಿಂದ ಇದನ್ನು ಬೇರ್ಪಡಿಸಬಹುದು. ಬಾಸ್ ಗ್ರುನ್ನಿಯೆನ್ಸ್ ಪ್ರಭೇದಕ್ಕೆ ಸೇರುವ ಯಾಕ್ ಎಂಬ ಪ್ರಾಣಿ ಇದೇ ಜಾತಿಯ ಇನ್ನೊಂದು ಆಕರ್ಷಕ ಪ್ರಾಣಿ. ಹಸುವಿನ ನಿಲುವನ್ನೇ ಪಡೆದಿದ್ದರೂ ಮುಂಭಾಗದಿಂದ ಕತ್ತಿನವರೆಗೆ ಹಾಗೂ ದೇಹದ ಕೆಳಭಾಗದಲ್ಲಿರುವ ಉದ್ದ ಹಾಗೂ ದಟ್ಟ ಕೂದಲುಗಳಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಲಡಾಕಿನ ಸುತ್ತ ಮುತ್ತಲಿನ ಕಣಿವೆಗಳಲ್ಲಿ ಮಾತ್ರ ವಾಸಿಸುತ್ತವೆ. ಕಾಡುಕೋಣ (ಬುಬೆಲಸ್ ಬುಬೆಲಿಸ್) ಮಧ್ಯಪ್ರದೇಶ, ಒರಿಸ್ಸ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಮಿನ ಕಾಡುಗಳಲ್ಲಿ ಕಂಡುಬರುತ್ತದೆ.
	ಶಾಪು ಅಥವಾ ಉರಿಯಲ್ (ಓರಿಸ್ ಒರಿಯಂಟ್ಯಾಲಿಸ್) ಎಂಬ ಸ್ತನಿ ಪಂಜಾಬ್ ಹಾಗೂ ಗುಜರಾತುಗಳಲ್ಲಿ ದೊರೆಯುತ್ತದೆ. ಇದರ ಕುತ್ತಿಗೆಯ ಕೆಳಭಾಗದಲ್ಲಿ ಉದ್ದವಾದ ದಟ್ಟಕೂದಲು ಉಂಟು. ಇದು ಕುರಿ ಮೇಕೆಗಳ ಸಂಬಂಧಿ. ಟಿಬೆಟಿನ ಕುರು ಓವಿಸ್ ಅಮ್ಮನ್ ಲಡಾಕಿನಿಂದ ಪೂರ್ವಕ್ಕೆ ಸಿಕ್ಕಿಮ್‍ವರೆಗಿನ ಪ್ರದೇಶಗಳಲ್ಲಿ ಕಾಣಬಹುದು. ಇವುಗಳಲ್ಲಿ ಹಾಜ್‍ಸೋನಿಯೈ ಹಾಗೂ ಪೋಲಿಯೈ ಎಂಬ ಎರಡು ಉಪಪ್ರಭೇದಗಳಿವೆ. ಇವುಗಳ ಕೊಂಬುಗಳು ಬುಡದಲ್ಲಿ ದಪ್ಪವಿದ್ದು ತುದಿಯೆಡೆಗೆ ಸುರುಳಿಸುತ್ತಿಕೊಂಡತ್ತಿರುತ್ತವೆ. ನೀಲಿಕುರಿ ಅಥವಾ ಭರಲ್ (ಸುಡೋಯಿಸ್ ನಯ್ಯಾರ್) ಲಡಾಕ್, ಟಿಬೆಟ್, ಸಿಕ್ಕಿಮ್‍ಗಳಲ್ಲಿ ಮಾತ್ರ ದೊರೆಯುತ್ತದೆ. ಕೋಪ್ರಾ ಐಬೆಕ್ಸ್ ಎಂಬ ಪ್ರಭೇದ ಕಾಶ್ಮೀರದಲ್ಲಿ ಮಾತ್ರ ಇದೆ. ಇದು ಇಲ್ಲಿನ ಅತಿ ಸುಂದರ ಕಾಡುಕುರಿಯೆನಿಸಿದೆ. ಕೋಪ್ರಾಫಾಲ್ಕನೆರಿ ಎಂಬ ಇನ್ನೊಂದು ಪ್ರಭೇದ ಕಾಶ್ಮೀರದ ಕಣಿವೆಗಳಿಂದ ಹಿಂದೂಕುಶ್‍ವರೆಗಿನ ಕಣಿವೆಗಳಲ್ಲಿ ಹರಡಿವೆ. ಕಾರ್ ಪ್ರಾಣಿಯ ಎರಡು ಬಗೆಗಳು ಭಾರತದಲ್ಲಿ ಉಂಟು. ಹಿಮಾಲಯದ ಕಾರ್ (ಹೆಮಿಟ್ರೇಗಸ್‍ಜೆಮ್ಲಾಹಿತಸ್) ಹಿಮಾಲಯದ ತಪ್ಪಲಿನ ಕಾಡುಗಳಲ್ಲಿಯೂ, ನೀಲಗಿರಿ ಕಾರ್ ಪಶ್ಚಿಮ ಘಟ್ಟಗಳಲ್ಲೂ, ನೀಲಗಿರಿಯಲ್ಲೂ ದೊರೆಯುತ್ತವೆ. ನೋಡಲು ನೀಲಗಿರಿ ಕಾರ್ ಆಡುಗಳಂತೆಯೇ ಇದೆಯಾದರೂ ದೇಹ ರಚನೆ ಹಾಗೂ ಕೋಡುಗಳ ಮೂಲಕ ಇವನ್ನು ಗುರುತಿಸಬಹುದು. ಹಿಮಾಲಯದ ಟಾರ್‍ನ ತಲೆಯ ಭಾಗವನ್ನುಳಿದ ದೇಹದ ಎಲ್ಲ ಭಾಗಗಳಲ್ಲೂ ಉದ್ದ ಕೂದಲುಗಳುಂಟು. ಹಿಮಾಲಯದ ತಪ್ಪಲುಗಳಲ್ಲಿ ಜಿಂಕೆ ಆಡುಗಳು ದೊರೆಯುತ್ತವೆ.
	ಗಜೆಲ ಗಜೆಲ ಪ್ರಭೇದದ (ಚಿಂಕಾರ) ಜಿಂಕೆ ಮಧ್ಯ ಭಾರತದ ಮತ್ತು ಕೃಷ್ಣಾನದಿಯ ದಕ್ಷಿಣ ತೀರದ ಮೈದಾನಗಳಲ್ಲಿ ವಾಸಿಸುತ್ತದೆ. ಭಾರತದ ಚಿಗರೆ (ಆಂಟಿಲೋಪ್ ಸರ್ವಿಕಾಪ್ರ) ಸೂರತ್ತಿನಿಂದ ದಕ್ಷಿಣಕ್ಕೆ ಕಾಣಸಿಗುತ್ತದೆ. ದಟ್ಟ ಕಾಡುಗಳನ್ನುಳಿದು ಮೈದಾನ ಪ್ರದೇಶಗಳಲ್ಲಿ ಅಥವಾ ಕಾಡಿನ ಅಂಚಿನಲ್ಲಿ ಇದರ ವಾಸ, ಗಂಡು ಮತ್ತು ಹೆಣ್ಣುಗಳಲ್ಲಿ ಭಿನ್ನತೆ ಸ್ಪಷ್ಟ. ಗಂಡಿನಲ್ಲಿ 50 ಸೆಂಮೀ ಉದ್ದದ ಒಂದು ಜೊತೆ ಕೊಂಬುಗಳಿವೆ. ಗಂಡು ಹೆಣ್ಣುಗಳಲ್ಲಿ ವರ್ಣ ವ್ಯತ್ಯಾಸವೂ ಸಾಮಾನ್ಯ. ನಾಲ್ಕು ಕೊಂಬಿನ ಚಿಗರೆ (ಟೆಟ್ರಾಸಿರಸ್ ಕ್ವಾಡ್ರಿಕಾರ್ನಿಸ್) ದಕ್ಷಿಣ ಭಾರತದ ಮೈದಾನವಾಸಿ. ದಟ್ಟ ಕಾಡುಗಳಲ್ಲಿ ವಾಸಿಸುವುದಿಲ್ಲ. ಗಾತ್ರದಲ್ಲಿ ಇದು ಸಾಮಾನ್ಯ ಜಿಂಕೆಗಳ ಅರ್ಧದಷ್ಟಿದೆ. ಮುಂಭಾಗದ ಕೊಂಬುಗಳು 2 ರಿಂದ 2.5 ಸೆಂಮೀ ಮತ್ತು ಹಿಂಭಾಗದವು 8 ರಿಂದ 10 ಸೆಂಮೀ ಉದ್ದ ಇವೆ.
	ನೀಲ್‍ಗಾಯಿ ಎಂಬುದು ಭಾರತಕ್ಕೆ ಮಾತ್ರ ಸೀಮಿತವಾದ ಒಂದು ಬಗೆಯ ಕಾಡೆತ್ತು. ಇದು ಅಸ್ಸಾಮ್, ಪಶ್ಚಿಮ ಬಂಗಾಳ, ಮಲಬಾರ್ ಪ್ರಾಂತ್ಯ ಹಾಗೂ ಇತರ ದಟ್ಟಕಾಡುಗಳ ಹೊರತಾಗಿ ಉಳಿದೆಲ್ಲ ಕಡೆಗಳಲ್ಲೂ ಇವೆ. 130-140 ಸೆಂಮೀ ಎತ್ತರದ ಈ ಪ್ರಾಣಿಗಳಲ್ಲಿ ಗಂಡಿಗೆ 20 ಸೆಂಮೀ ಉದ್ದದ ಕೊಂಬುಗಳಿವೆ. ಹೆಣ್ಣಿಗೆ ಕೊಂಬಿಲ್ಲ. ಗಂಡಿನ ಕುತ್ತಿಗೆಯ ಕೆಳಭಾಗದಲ್ಲಿ ಕೂದಲಿನ ಗೊಂಚಲು ಉಂಟು. ಗಂಡುಹೆಣ್ಣುಗಳಲ್ಲಿ ವರ್ಣವ್ಯತ್ಯಾಸವೂ ಇದೆ.
	ಭಾರತದ ಸುಂದರ ಪ್ರಾಣಿಗಳ ಇನ್ನೊಂದು ಗುಂಪು ಜಿಂಕೆಗಳದ್ದು. ಇವುಗಳ ಪೈಕಿ ಕಾಶ್ಮೀರ ಜಿಂಕೆ ಕಾಶ್ಮೀರದ ಕಣಿವೆಗಳಲ್ಲಿ ಕಂಡುಬರುತ್ತದೆ. ಮಣಿಪುರದ ಕಾಡುಗಳಲ್ಲಿ ತಮಿನ್ ಎಂಬ ಇನ್ನೊಂದು ಜಿಂಕೆ ವಾಸಿಸುತ್ತದೆ. ಜಿಂಕೆಯ ವಿವಿಧ ಪ್ರಭೇದಗಳನ್ನು ಕೊಂಬುಗಳ ಉದ್ದ ಹಾಗೂ ರಚನೆಯ ಮೂಲಕ ಗುರುತಿಸಲಾಗುತ್ತದೆ. ಜೌಗುಜಿಂಕೆ (ಸರ್ವಸ್ ಡುವಯುಸೆಲಿ) ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಸುಂದರಬನಗಳಲ್ಲಿ ವಾಸಿಸುತ್ತದೆ. ಇದರ ಕೊಂಬುಗಳು ಅ ಆಕಾರದಲ್ಲಿದ್ದು ತುದಿಯಲ್ಲಿ ಕವಲೊಡೆದಿವೆ. ಸರ್ವಸ್ ಯೂನಿಕಲರ್ ಅಥವಾ ಕಡವೆ (ಸಾಂಬಾರ್) ಭಾರತದ ಎಲ್ಲ ಕಾಡುಗಳಲ್ಲಿ ವಾಸಿಸುವ ದೊಡ್ಡಗಾತ್ರದ ಜಿಂಕೆ. ಇದರ ಕುತ್ತಿಗೆಯ ಭಾಗದಲ್ಲಿ ಉದ್ದಕೂದಲುಗಳುಂಟು. ಪಂಜಾಬ್ ಮತ್ತು ಅಸ್ಸಾಮಿನ ಕಾಡುಗಗಳಲ್ಲಿ ಆಕ್ಸಿಸ್ ಪೊರ್ಸಿನಸ್ ಎಂಬ ಸಾರಂಗ ದೊರೆಯುತ್ತದೆ. ಆಕ್ಸಿಸ್ ಆಕ್ಸಿಸ್ ಎಂಬ ಸಾರಂಗ ಭಾರತದ ಎಲ್ಲ ಭಾಗಗಳಲ್ಲಿಯೂ ಶ್ರೀಲಂಕಾದಲ್ಲಿಯೂ ವಾಸಿಸುವ ಪ್ರಾಣಿ. ಇದನ್ನು ಚುಕ್ಕೆ ಜಿಂಕೆ ಎಂದು ಕೂಡ ಕರೆಯಲಾಗುತ್ತದೆ. ಈ ಪ್ರಾಣಿಯ ಮೈ ಬಂಗಾರಬಣ್ಣದ; ಬಿಳಿ ಅಥವಾ ಹಳದಿ ವರ್ಣದ ಚುಕ್ಕೆಗಳಿಂದ ಕೂಡಿದೆ. ಕಾಡುಕುರಿ ಅಥವಾ ಬೊಗಳುವ ಜಿಂಕೆ (ಮುಂಟಿಯಾಕಸ್ ಮುಂಟ್‍ಜಾಕ್) ಉತ್ತರ ಭಾರತದಲ್ಲಿದೆ. ಇದರ ಕೊಂಬು ಚಿಕ್ಕದ್ದು. ಕಸ್ತೂರಿ ಮೃಗ ಕಾಶ್ಮೀರ ಮತ್ತು ಸಿಕ್ಕಿಮ್‍ಗಳಲ್ಲಿ ವಾಸಿಸುತ್ತದೆ. ಕೂರಂದಿ (ಟ್ರಾಗುಲಸ್ ಮೆಮಿನ್ನಾ) ದಕ್ಷಿಣ ಭಾರತದಲ್ಲಿ ದೊರೆಯುತ್ತದೆ. ಇದು ಕೊಂಬುರಹಿತ ಜಿಂಕೆ ದೇಹದ ಮೇಲೆ ಬಿಳಿ ಅಥವಾ ಹಳದಿ ಪಟ್ಟೆಗಳುಂಟು.
	ಹಂದಿಗಳ ಪೈಕಿ ಸಾಕುಹಂದಿ ಹಾಗೂ ಕಾಡುಹಂದಿಗಳಿವೆ. ಕಾಡುಹಂದಿ (ಸಸ್ ಸ್ಕ್ರಾಫ) ಭಾರತದ ಎಲ್ಲ ಕಾಡುಗಳಲ್ಲಿ ಮತ್ತು ಬವರ್i ಹಾಗೂ ಮಲೇಷ್ಯಾಗಳ ಕುರುಚಲು ಕಾಡುಗಳಲ್ಲಿ ಹುಲ್ಲುಗಾವಲುಗಳಲ್ಲಿ ವಾಸಿಸುತ್ತದೆ. ಇರುವೆ ಭಕ್ಷಕ ಅಥವಾ ಪ್ಯಾಂಗೋಲಿನ್ನಿನ ಎರಡು ಪ್ರಭೇದಗಳಿದ್ದು ಭಾರತದಲ್ಲಿ ಮ್ಯಾನಿಸ್ ಕ್ರಾಸಿಕಾಡೇಟ ಎಂಬ ಪ್ರಭೇದ ವಾಸಿಸುತ್ತದೆ. ಇದರ ಮೈಮೇಲೆ ಬಿರುಸಾದ ತಟ್ಟೆಗಳಂಥ ಕವಚ ಉಂಟು. ಗಂಡಾಂತರ ಒದಗಿದಾಗ ಈ ಪ್ರಾಣಿ ಶರೀರವನ್ನು ಪೂರ್ತಿ ಸುರುಳಿಸುತ್ತಿಕೊಂಡು ಗಟ್ಟಿ ಚೆಂಡಿನಂತಾಗುತ್ತದೆ. ಬಿಲವಾಸಿಯಾದ ಇದು ಇರುವೆ ಗೆದ್ದಲುಗಳನ್ನು ತಿಂದು ಬದುಕುತ್ತದೆ.
	ಜಲವಾಸಿ ಸ್ತನಿಗಳ ಪೈಕಿ ತಿಮಿಂಗಿಲಗಳೂ ಡಾಲ್ಫಿನ್‍ಗಳೂ ಭಾರತದಲ್ಲುಂಟು. ಬಲೀನಾಪ್ಟಿರ ಮಸ್ಕುಲಸ್, ಫೈಸೆಸ್ಟರ್ ಕಟಡಾನ್ ಎಂಬ ಎರಡು ಪ್ರಭೇದಗಳು ಭಾರತದ ಜಲಪರಿಧಿಯಲ್ಲಿ ಕಾಣುವ ತಿಮಿಗಳು. ಡಾಲ್ಫಿನ್‍ಗಳಲ್ಲಿ ಡೆಲ್ಫಿನಸ್ ಡೆಲ್ಫಿಸ್ ಭಾರತೀಯ ಗಡಿಯಲ್ಲಿ ಆಗಾಗ ಕಂಡು ಬಂದಿದೆ. ಬ್ರಹ್ಮಪುತ್ರ ನದಿಯಲ್ಲಿ ಪ್ಲಾಟಿನಿಸ್ಟ ಗ್ಯಾಂಜೆಟಿಕ ಎಂಬ ಪ್ರಭೇದದ ಡಾಲ್ಫಿನ್ ಕಾಣಬಹುದು. ಇದು 2-3 ಮೀ ಉದ್ದ ಪ್ರಾಣಿ ಕಡಲಹಸು (ಡುಗಾಂಗ್ ಡುಗಾಂಗ್) ಸಾಮಾನ್ಯ ನೋಟಕ್ಕೆ ತಿಮಿಂಗಿಲವನ್ನೇ ಹೋಲುತ್ತದೆ. ಅಂಡಮಾನ್ ದ್ವೀಪಗಳಲ್ಲಿ, ಮಲಬಾರ್ ಹಾಗೂ ಕಚ್ ತೀರಗಳಲ್ಲಿ ಇದು ಸಾಮಾನ್ಯ.
	ಪ್ರಾಣಿವಿತರಣೆಯನ್ನು ವಿವರಿಸುವಾಗ ಸಾಮಾನ್ಯವಾಗಿ ಸ್ತನಿಗಳನ್ನಷ್ಟೆ ಗಣನೆಗೆ ತೆಗೆದುಕೊಳ್ಳುವುದು ರೂಢಿ. ಆದರೆ ರೂಪ ವೈವಿಧ್ಯ ಕೇವಲ ಸ್ತನಿಗಳಿಗೆ ಮಾತ್ರ ಮೀಸಲು ಎಂದರ್ಥವಲ್ಲ. ಎಲ್ಲ ವರ್ಗದ ಪ್ರಾಣಿಗಳಲ್ಲೂ ವೈವಿಧ್ಯ ಉಂಟು. ಭಾರತದಲ್ಲಿ ಕೂಡ ಉಳಿದ ವರ್ಗದ ಪ್ರಾಣಿಗಳು ಸ್ತನಿಗಳಷ್ಟೆ ವೈವಿಧ್ಯಮಯವಾಗಿವೆ, ಉದಾಹರಣೆಗೆ ಭಾರತದಲ್ಲಿ 2060 ಪಕ್ಷಿ ಪ್ರಭೇದಗಳು ಉಂಟು. ಇವುಗಳ ಪೈಕಿ 350 ಕ್ಕೂ ಹೆಚ್ಚು ಪಕ್ಷಿಗಳು ಪ್ರತಿವರ್ಷ ಚಳಿಗಾಲದಲ್ಲಿ ಉತ್ತರದ ದೇಶಗಳಿಂದ ವಲಸೆ ಬರುವಂಥವು. ಪ್ರತಿ ಪ್ರಭೇದದಲ್ಲಿಯೂ ಹಲವಾರು ಉಪಪ್ರಭೇದಗಳಿವೆ. ಉಪಪ್ರಭೇದಗಳನ್ನೂ ಪರಿಗಣಿಸಿದರೆ ಭಾರತದಲ್ಲಿ 8000 ಕ್ಕೂ ಹೆಚ್ಚು ಬಗೆಯ ಪಕ್ಷಿಗಳಿರಬಹುದು ಎಂದು ಹೇಳಲಾಗಿದೆ. ಕೆಲವು ಮುಖ್ಯಗುಂಪುಗಳನ್ನು ಉದಹರಿಸುವುದಾದರೆ ಭಾರತದಲ್ಲಿ ಕಾಗೆಗಳ ಎರಡು ಪ್ರಭೇದಗಳು, ಟಿಟ್ ಪಕ್ಷಿಯ ಎರಡು ಪ್ರಭೇದಗಳು ಬ್ಯಾಬರ್‍ನ ಎಂಟು ಪ್ರಭೇದಗಳು ಥ್ರಶ್ ಪಕ್ಷಿಯ ಎರಡು ಪ್ರಭೇದಗಳು, ಬುಲ್ ಬುಲ್ ಹಕ್ಕಿಯ ಒಂಬತ್ತು ಪ್ರಭೇದಗಳು ಕಾಣಬರುವುವು. ಇವುಗಳಲ್ಲಿ ಪಿಕ್ನೊ ನೋಟಸ್ ಲ್ಯೂಟಿಯೋಲಸ್ ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳಲ್ಲಿ ಮಾತ್ರ ಸಿಗುತ್ತದೆ. ಕೀಟ ಭಕ್ಷಕ ಪಕ್ಷಿ ರಾಬಿನ್ನಿನ ಎರಡು ಪ್ರಭೇದಗಳು ಇಲ್ಲಿವೆ. ನೊಣಹಿಡುಕ ಪಕ್ಷಿಗಳ ನಾಲ್ಕು ಪ್ರಭೇದಗಳಿದ್ದು ಅವುಗಳ ಪೈಕಿ ಬಿಳಿಚುಕ್ಕೆಯ ನೊಣಹಿಡುP ಗುಜರಾತ್, ಮಧ್ಯಪ್ರದೇಶ ಮತ್ತು ದಕ್ಷಿಣ ಭಾರತದಲ್ಲಿ ಮಾತ್ರ ವಾಸಿಸುತ್ತದೆ. ಕಳಿಂಗಪಕ್ಷಿ, ಗೀಜಗ, ಓರಿಯೋಲ್, ಮೈನಾ, ಮುನಿಯ ಗುಬ್ಬಚ್ಚಿ, ಸ್ಕೈಲಾರ್ಕ್, ಪುಷ್ಪಕುಟಿಗ, ಮರಕುಟಿಕ, ಕೋಗಿಲೆ, ಫೆಸೆಂಟ್, ಗಿಳಿ, ಜೇನುಭಕ್ಷಕ, ಗೂಬೆ, ಗಿಡುಗ, ರಣಹದ್ದು, ಡೇಗೆ, ಕಾಡುಕೋಳಿ, ಬಸ್ಟರ್ಡ್, ಹಾರ್ನಬಿಲ್ ಮುಂತಾದ ಎಲ್ಲ ಗುಂಪಿನ ಪಕ್ಷಿಗಳೂ ಭಾರತದ ಒಂದಲ್ಲ ಒಂದು ಕಡೆ ದೊರೆಯುತ್ತವೆ. ನವಿಲು ಈ ದೇಶದ ವರ್ಣಮಯ ಪಕ್ಷಿ. ಎಲ್ಲ ಭಾಗಗಳಲ್ಲೂ ವಾಸಿಸುತ್ತವೆ. ಇದು ಭಾರತದ ರಾಷ್ಟ್ರಪಕ್ಷಿ, ಜಲವಾಸಿ ಪಕ್ಷಿಗಳಲ್ಲಿ ಕೂಡ ಎಲ್ಲ ಗುಂಪುಗಳ ಒಂದೆರಡು ಪ್ರಭೇದಗಳನ್ನು ಕಾಣಬಹುದು. ಇವುಗಳ ಪೈಕಿ ಹೆರಾನ್, ಈಗ್ರೆಟ್, ಫ್ಲೆಮಿಂಗೋ ಬಾತು, ಟೀಲ್, ಸ್ಟಾರ್ಕ್, ಐಬಿಸ್, ಸ್ಪೂನ್‍ಬಿಲ್, ಪೆಲಿಕನ್ ಮುಂತಾದವು ಮುಖ್ಯವಾದುವು. ಭಾರತದಲ್ಲಿ ಹಲವಾರು ಪಕ್ಷಿಧಾಮಗಳಿದ್ದು ಸೈಬೀರಿಯ, ರಷ್ಯ ಹಾಗೂ ಉತ್ತರದ ಇತರ ದೇಶಗಳಿಂದ ವಲಸೆ ಬರುವ ಪಕ್ಷಿಗಳನ್ನು ಕೆಲವು ಋತುಗಳಲ್ಲಿ ಕಾಣಬಹುದು.
	ಸರೀಸೃಪಗಳ ಎಲ್ಲ ಪ್ರಮುಖ ಜಾತಿಗಳೂ ಭಾರತದಲ್ಲಿವೆ. ಆಮೆಗಳ ಗುಂಪಿನ ಕಿಲೋನ್, ಟೆಸ್ಟುಡೊ, ಡರ್ಮೊಕಿಲಸ್ ಪ್ರಭೇದಗಳು ಇವೆ. 250ಕ್ಕೂ ಹೆಚ್ಚು ಸರ್ಪ ಪ್ರಭೇದಗಳಿವೆ ಎಂದು ಅಂದಾಜುಮಾಡಲಾಗಿದೆ. ಇವುಗಳಲ್ಲಿ ಕಾಳಿಂಗ ಸರ್ಪ ಹಾಗೂ ನಾಗರಹಾವು ದಕ್ಷಿಣ ಭಾರತದ ಕಾಡುಗಳಲ್ಲಿ ವಾಸಿಸುತ್ತವೆ. ದಟ್ಟ ಅರಣ್ಯಗಳಲ್ಲಿ ಹೆಬ್ಬಾವು, ಕಟ್ಟಿನಹಾವು, ಇಮ್ಮಡಿಗ ಮುಂತಾದ ಹಾವುಗಳು ವಾಸಿಸುತ್ತವೆ. ಇದೇ ಗುಂಪಿಗೆ ಸೇರಿದ ಮೊಸಳೆಗಳೂ ಮುಖ್ಯವಾಗಿ ಕ್ರಾಕಡಿಲಸ್ ಪಾಲುಸ್ಟ್ರಿಸ್ ಮತ್ತು ಗೇವಿಯಾಲಿಸ್ ಗ್ಯಾಂಜೆಟಿಕ ಕಾಣದೊರೆಯುವುವು.
	ಉಭಯಜೀವಿಗಳಲ್ಲಿ ಕೈಕಾಲು ರಹಿತ ಇಕ್‍ಥಿಯೋಫಿಸ್ ಎಂಬ ವಿಚಿತ್ರ ಪ್ರಾಣಿಯುಂಟು. ಪಶ್ಚಿಮ ಘಟ್ಟಗಳಲ್ಲಿ ಮಲಬಾರ್ ಪ್ರಾಂತ್ಯದಲ್ಲಿ ಇವು ಹೆಚ್ಚು. ಕಪ್ಪೆಗಳ ಹಲವು ಪ್ರಭೇದಗಳಿವೆ. ಗೂಳಿಕಪ್ಪೆ, ಮರಗಪ್ಪೆ, ನೆಲಗಪ್ಪೆ ಮುಂತಾದವು ಉಭಯ ಜೀವಿಗಳ ಪೈಕಿ ಮುಖ್ಯವಾದವು.
	ಮೀನುಗಳಲ್ಲಿ ಕೂಡ ಭಾರತ ಮುಖ್ಯಸ್ಥಾನ ಪಡೆಯುತ್ತದೆ, ಮೀನಿನ ಎಲ್ಲ ಗಣಗಳೂ ಇಲ್ಲಿವೆ. ಮೀನುಗಾರಿಕೆ ಈ ದೇಶದ ಕರಾವಳಿ ಪ್ರದೇಶಗಳ ಲಕ್ಷಾಂತರ ಜನರ ಮುಖ್ಯ ಕಸುಬು. ಮೀನನ್ನು ರಫ್ತುಮಾಡುವ ಪ್ರಮುಖ ದೇಶಗಳ ಪೈಕಿ ಭಾರತವೂ ಒಂದು. ದೈತ್ಯಶಾರ್ಕ್ ಮಿನುಗಳ ಪೈಕಿ ಸ್ಕೋಲಿಯೊಡಾನ್, ಸ್ಟೀಗೋಸ್ಟಿವi, ಜೈಗೀನ, ಸಿಲ್ಲಿಯಮ್‍ಗಳೂ ರೇಮೀನುಗಳ ಪೈಕಿ ಪ್ರಿಸ್ಟಿಸ್. ಟ್ರೈಗಾನ್, ಎಲೆಕ್ಟ್ರಿಕ್‍ರೇ, ಟಾರ್ಪಿಡೊ ಮುಂತಾದವು ದೊರೆಯುತ್ತವೆ. ಮೂಳೆ ಮೀನುಗಳ ಹಲವಾರು ಪ್ರಭೇದಗಳಿದ್ದು ಅವುಗಳಲ್ಲಿ ಕೆಲವು ಸಿಹಿನೀರಿನಲ್ಲೂ ಇನ್ನು ಕೆಲವು ಸಮುದ್ರದಲ್ಲೂ ವಾಸಿಸುತ್ತವೆ. ಇವುಗಳ ಪೈಕಿ ಲೇಬಿಯೋ, ಕಾಟ್ಲ, ಸಿರೈನ, ಮಿಸ್ಟಸ್, ವೆಲ್ಲಾಗೊ, ನೋಡಾಪ್ಟಿರಸ್, ಓಫಿಯೊಕೆಫಲಸ್ ಮುಂತಾದವನ್ನು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ. ಹಲವು ಮೀನುಗಳನ್ನು ಅವುಗಳ ವರ್ಣ ಮತ್ತು ಸುಂದರ ಶರೀರ ರಚನೆಯಿಂದಾಗಿ ಮತ್ಸ್ಯಾಗಾರಗಳಲ್ಲಿ ಸಾಕುವುದುಂಟು. ಭಾರತದ ಕೆಲವು ಮೀನುಗಳಿಂದ ಮೀನೆಣ್ಣೆ, ಮೀನು ಗೊಬ್ಬರ ಮುಂತಾದುವನ್ನು ತಯಾರಿಸಲಾಗುತ್ತಿದೆ. ವಿಷಯುಕ್ತ ಮೀನುಗಳಾದ ಮೈಲಿಯೋಬೇಟಸ್, ಸ್ಕ್ವಾಲಸ್ ಅಥವಾ ನಾಯಿ ಮೀನುಗಳೂ ಭಾರತದ ತೀರ ಪ್ರದೇಶಗಳಲ್ಲಿ ದೊರೆಯುತ್ತವೆ. ಅಕಶೇರುಕ ಮತ್ತು ಕಶೇರುಕಗಳ ಮಧ್ಯೆ ಕೊಂಡಿಯಂತಿರುವ ಬೆಲನೋಗ್ಲಾಸಸ್ ದಕ್ಷಿಣಭಾರತದ ಕಡಲತೀರಗಳಲ್ಲಿ ದೊರೆಯುತ್ತದೆ. ಆಂಫಿಯಾಕ್ಸಿಸ್ ಕಡಲ ಚಿಲುಮೆಗಳೂ (ಸೀ ಸ್ವರ್ಟ್) ಇಲ್ಲುಂಟು. 
	ಅಕಶೇರುಕಗಳ ಪೈಕಿ ಏಕಕಣಜೀವಿಗಳಿಂದ ಹಿಡಿದು ಕಂಟಕಚರ್ಮಿಗಳವರೆಗಿನ ಎಲ್ಲ ಗುಂಪುಗಳೂ ಭಾರತದಲ್ಲಿವೆ. ಭಾರತದ ಅಕಶೇರುಕಗಳೂ ವೈವಿಧ್ಯಮಯ. ಏಕಕೋಶಜೀವಿಗಳಲ್ಲಿ ಸ್ವತಂತ್ರವಾಗಿ ಜೀವಿಸುವ ಪ್ರಭೇದಗಳೂ ಗುಂಪಾಗಿ ಜೀವಿಸುವ ಪ್ರಭೇದಗಳೂ, ಪರತಂತ್ರಜೀವಿಗಳೂ ದೊರೆಯುತ್ತವೆ. 
	ಕಡಲ ಕುಸುಮ, ಸೀ ಅನಮೋನ್‍ಗಳ ಹಲವು ಪ್ರಭೇದಗಳು ಇವೆ. ದಕ್ಷಿಣದ ಕಡಲ ತೀರಗಳಲ್ಲಿ ಹವಳದ ಪ್ರಾಣಿಗಳು ಹವಳದ ದಿಬ್ಬಗಳನ್ನೇ ನಿರ್ಮಿಸಿರುವುದನ್ನು ಕಾಣುತ್ತೇವೆ. ವಲಯವಂತಗಳಲ್ಲಿ ಪಾಲಿಕೀಟ ಗುಂಪಿನ ಹಲವು ಪ್ರಭೇದಗಳು, ವಿವಿಧ ಪ್ರಭೇದದ ಎರೆಹುಳುಗಳು, ಜಿಗಣೆಗಳೂ ಭಾರತದಲ್ಲಿವೆ ಈ ದೇಶ ಸಂಧಿಪದಿಗಳ ಅಸಂಖ್ಯ ಪ್ರಭೇದಗಳಿಗೂ ಆವಾಸಸ್ಥಾನವಾಗಿದೆ. ಸಂಧಿಪದಿಗಳ ಪೈಕಿ ಉಪಕಾರಿ ಹಾಗೂ ಅಪಕಾರಿ ಪ್ರಾಣಿಗಳಿವೆ. ಸೀಗಡಿ, ಲಾಬ್‍ಸ್ಟರ್ ಮತ್ತು ಏಡಿಗಳು ಮಾನವನ ಆಹಾರವಾಗಿದ್ದು ಇವು ಮತ್ಸ್ಯಗಾರಿಕೆಯ ಪರಿಮಿತಿಯಲ್ಲಿ ಬರುತ್ತವೆ. ಭಾರತದ ಕೀಟಗಳೂ ವೈವಿಧ್ಯಮಯ. ಸಹಸ್ರಾರು ಪ್ರಭೇದಗಳು ದೊರೆಯುತ್ತವೆ. ಇವುಗಳ ಪೈಕಿ ರೇಷ್ಮೆಪತಂಗ, ಜೇನು, ಅರಗುಕೀಟ ಉಪಕಾರಿಗಳಾದರೆ ಸೊಳ್ಳೆ, ಚಿಗಟ ಮುಂತಾದವು ರೋಗ ಹರಡುವ ಕೀಟಗಳು. ಮೃದ್ವಂಗಿಗಳ ಪೈಕಿ ಹಲವು ರೀತಿಯ ಶಂಖಗಳು ಮತ್ತು ಮುತ್ತುಗಳನ್ನು ಉತ್ಪಾದಿಸುವ ಪ್ರಭೇದಗಳು ಭಾರತದಲ್ಲಿವೆ.
	(ಎಸ್.ಎನ್.ಎಚ್.)

ಭಾರತದ ಪ್ರಮುಖ ಜೈವಿಕ ವಲಯಗಳು
ಕ್ರಮ ಸಂಖ್ಯೆ
ಜೈವಿಕ ವಲಯ
ಭೌಗೋಳಿಕ ಪ್ರದೇಶಗಳು
ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ)

ಹಿಮಾಲಯ ಗಡಿ ಪ್ರದೇಶ
ಉನ್ನತ ಶಿಖರ ಪ್ರದೇಶಗಳು
186200

ಹಿಮಾಲಯ ಪ್ರದೇಶ
ವಾಯುವ್ಯ ಹಿಮಾಲಯ
ಪಶ್ಚಿಮ ಹಿಮಾಲಯ
ಮಧ್ಯ ಹಿಮಾಲಯ
ಈಶಾನ್ಯ ಹಿಮಾಲಯ
69000
72000
123000
83000

ಮರುಭೂಮಿ
ಕಚ್
ಥಾರ್
ಲಡಾಕ್
45000
180000
(ಲಭ್ಯವಿಲ್ಲ)

ಅರೆ ಶುಷ್ಕ
ಮಧ್ಯ ಭಾರತ
ಗುಜರಾತ್ -ರಾಜ್ವಾರ
107600
400400

ಪಶ್ಚಿಮ ಘಟ್ಟ ಕರಾವಳಿ ಪ್ರದೇಶ
ಮಲಬಾರ್ ತೀರ ಪ್ರದೇಶ
ಪಶ್ಚಿಮ ಘಟ್ಟ ಶ್ರೇಣಿಗಳು
59700
99300

ದಕ್ಷಿಣ ಪರ್ಯಾಯ ದ್ವೀಪ (ದೀಪ ಕಲ್ಪ)
ದಕ್ಷಿಣ ತಪ್ಪಲು
ಪಶ್ಚಿಮ ಘಟ್ಟ ಪ್ರದೇಶಗಳು
ಪೂರ್ವ ತಪ್ಪಲು
ಛೋಟಾ ನಾಗಪುರ
ಮಧ್ಯ ಪ್ರಸ್ಥಭೂಮಿ
378000
341000
198000
217000
287000

ಗಂಗಾನದಿಯ ತೀರ ಪ್ರದೇಶ
ಗಂಗಾ ಮೇಲ್ದಂಡೆ ಬಯಲು
ಗಂಗಾ ಕೆಳದಂಡೆ ಬಯಲು
206400
153000

ಈಶಾನ್ಯ ಭಾರತ
ಬ್ರಹ್ಮಪುತ್ರಾ ಕಣಿವೆ
ಈಶಾನ್ಯ ಗುಡ್ಡ ಗಾಡು
65200
106200

ದ್ವೀಪಗಳು
ಅಂಡಮಾನ್ ದ್ವೀಪಗಳು
ನಿಕೋಬಾರ್ ದ್ವೀಪಗಳು
ಲಕ್ಷದ್ವೀಪಗಳು
6397
1930
180

ಕಡಲ ತೀರಗಳು
ಪಶ್ಚಿಮ ತೀರ
ಪೂರ್ವ ತೀರ
6500
6500

ಅಲ್ಪ ಸಂಖ್ಯಾ ಪ್ರಭೇದಗಳು ಅಂಕೆ-ಅಂಶಗಳು
ಕ್ರಮ ಸಂಖ್ಯೆ
ವಂಶಗಳು
ಭಾರತ
ಜಗತ್ತು
ಶೇಕಡವಾರು (%)

ಮೀಸೋಜûೂನಾ
10
71
14.08

ರೋಟಿಫೆರಾ
330
2500
13.2

ಗಾಸ್ಟ್ರೋಟ್ರೈಕಾ
100
3000
3.33

ಕೈನೋರಿಂಖಾ
10
100
10.00

ಅಕ್ಯಾಂಥೋಕಿಫಾಲಾ
229
800
28.63

ಸೈಪಂಕ್ಯುಲಾ
35
145
24.14

ಪಿಕ್ನೋಗೋನಿಡಾ
16
600
2.67

ಸಿಂಫೈಲಾ
4
120
3.33

ಫೊರೋನಿಡಾ
3
11
27.27

ಎಕ್ಟೋಪ್ರೋಕ್ಟಾ (ಬ್ರಯೋಜûೂನಾ)
200
4000
5.00

ಎಂಟೋಪ್ರೋಕ್ಟಾ
100
160
62.5

ಬ್ರಾಕಿಯೋಪೋಡಾ
3
300
1.00

ಕೀಟೋಗ್ನಾಥಾ
30
111
27.03

ಟಾರ್ಡಿಗ್ರಾಡಾ
30
514
5.84

ಭಾರತದಲ್ಲಿ ಯಾವುದೇ ಪ್ರತಿನಿಧಿಗಳಿಲ್ಲದ ವಂಶಗಳು
						ಜಗತ್ತಿನ ಪ್ರಭೇದ ಸಂಖ್ಯೆ
1) ನೆಮರ್‍ಟೀನಿಯಾ					600
2) ನೆಮಟೋಮಾರ್ಫ್					250	
3) ಪಾರೋಪೋಡಾ					360
4) ಪೊಗೋನೋಫೋರಾ					 80
5) ಪ್ರಯಾಪುಲಿಡಾ					 8
6) ಪೆಂಟಾಸ್ಟೋಮಿಡಾ					 70

ಒಟ್ಟಾರೆ ಭಾರತದಲ್ಲಿ ಪ್ರಾಣಿ ಪ್ರಭೇದಗಳ ಸಂಖ್ಯೆ - 89385
ಜಗತ್ತಿನ ಪ್ರಾಣಿ ಪ್ರಭೇದಗಳ ಸಂಖ್ಯೆ - 1228153
ಭಾರತದ ಪ್ರತಿನಿಧ ಪ್ರಭೇದಗಳ - 7.28 %

ಭಾರತದ ಜೀವಿ ವೈವಿದ್ಯ ಅಂಕೆ-ಸಂಖ್ಯೆಗಳ ಮಾಹಿತಿ
ಕ್ರಮ ಸಂಖ್ಯೆ
ಪ್ರಾಣಿ ಸಾಮ್ರಾಜ್ಯದ ವಂಶಗಳು
ಭಾರತ (ಪ್ರಭೇದಗಳು)
ಜಗತ್ತು (ಪ್ರಭೇದಗಳು)
ಭಾರತದ (%) ಶೇಕಡಾವಾರು

ಪ್ರೋಟೋಜûೂನ (ಏಕಕೋಶಿ)
2577
31250
8.5

ಪೋರಿಫೆರಾ (ಸ್ಪಂಜುಗಳು)
486
4562
10.65

ಕುಟುಕು ಕಣವಂತ
ನೈಡೇರಿಯಾ
ಎನೈಡೇರಿಯಾ (ಕ್ವೀನೋಫೋರಾ)

842
12

9916
100

8.49
12.00

ಚಪ್ಪಟೆ ಹುಳುಗಳು
1622
17500
9.27

ದುಂಡು ಹುಳುಗಳು
2850
30000
9.5

ವಲಯ ವಂತಗಳು
840
12700
6.61

ಸಂದಿ ಪದಿ (ಒಟ್ಟು)
ಕ್ರಸ್ಟೇಷಿಯಾ
ಕೀಟ
ಅರಾಕ್ನಿಡಾ
ಖಿಲೋಪೋಡಾ
ಡಿಪ್ಲೋಪೋಡಾ
ಒನಿಕೋಫೋರಾ
ಮೀರೋಸ್ಟೋಮಾಟಾ
68389
2934
59353
5818
100
162
1
2
987949
35534
867391
73440
3000
7500
100
4
6.92
8.26
6.84
7.92
3.33
2.16
1.0
50.0

ಮೃದ್ವಂಗಿ
5070
66535
7.62

ಕಂಟಕ ಚರ್ಮಿ
765
6223
12.29

ಕಾರ್ಡೇಟ (ಒಟ್ಟು)
ಹೆಮಿ ಕಾರ್ಡೇಟಾ
ಸೆಫಾಲೋ ಮತ್ತು ಯು ಕಾರ್ಡೇಟಾಗಳು
ಮತ್ಸ್ಯಗಳು
ಉಭಂiÀಜೀವಿ
ಸರೀಸೃಪ
ಪಕ್ಷಿಗಳು
ಸ್ತನಿಗಳು
4886
12
119

2546
209
456
1166
390
48451
120
2106

21723
5150
5817
9026
4629
10.07
10.00
5.65

11.72
4.06
7.84
12.91
8.43

ಪರಿಷ್ಕರಣೆ: ಡಾ. ಎನ್.ಎಸ್. ಲೀಲಾ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ